ಮಡಿಕೇರಿ: ಕೊಡಗಿನ ಕುಶಾಲನಗರ ವ್ಯಾಪ್ತಿಯಲ್ಲಿ ಇಬ್ಬರು ಎಸ್ಟೇಟ್ ಮಾಲೀಕರು ಕಾಡಾನೆಯನ್ನು ಗುಂಡಿಕ್ಕಿ ಕೊಂದಿದ್ದು, ಸಾಯುವ ವೇಳೆ ಆನೆ ಗರ್ಭಿಣಿಯಾದ ಪರಿಣಾಮ ತಾಯಿ ಆನೆಯೊಂದಿಗೆ ಭ್ರೂಣದಲ್ಲಿದ್ದ ಆನೆ ಕೂಡ ಸಾವನ್ನಪ್ಪಿದೆ.
ಹಸಿವು ನೀಗಿಸಿಕೊಳ್ಳಲು ತೋಟದತ್ತ ನುಗ್ಗಿದ 10 ತಿಂಗಳ ಗರ್ಭಿಣಿ ಹೆಣ್ಣಾನೆಯೊಂದು ದಾರುಣವಾಗಿ ಉಸಿರು ಚೆಲ್ಲಿದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ರಸೂಲ್ ಪುರ ಬಾಳುಗೋಡಿನಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಈ ಹೆಣ್ಣಾನೆಯನ್ನು ಕಿಡಿಗೇಡಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಅಂದಾಜು 20 ವರ್ಷದ ಹೆಣ್ಣಾನೆಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಡಿಂಪು ಎಂಬುವವರ ತೋಟದಲ್ಲಿ ಆನೆ ಸತ್ತು ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಬೆಳಿಗ್ಗೆಯೇ ಸ್ಥಳಕ್ಕೆ ಮಡಿಕೇರಿ ಡಿಎಫ್ಓ ಶಿವರಾಮ್ ಬಾಬು, ಕುಶಾಲನಗರ ಆರ್ಎಫ್ಓ ಶಿವರಾಮ್, ದುಬ್ಬಾರೆ ವ್ಯಾಪ್ತಿಯ ಡಿಆರ್ಎಫ್ಓ ಕೆ.ಪಿ. ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಯು ಸತ್ತು ಬಿದ್ದಿರುವ ತೋಟದ ಮಾಲೀಕರಾದ ಡಿಂಪು ಮತ್ತು ಅದೇ ಗ್ರಾಮದ ಮತ್ತೋರ್ವ ವ್ಯಕ್ತಿ ದಿನೇಶ್ ಎಂಬುವವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿ ಎಸ್ಟೇಟ್ ಮಾಲೀಕರಾದ ಜಗದೀಶ್ ಮತ್ತು ಡಿಂಪಲ್ ಅವರ ಮನೆಯಿಂದ ಬಂದೂಕುಗಳು ನಾಪತ್ತೆಯಾಗಿದ್ದರೂ ಅವರು ನಾಪತ್ತೆಯಾಗಿದ್ದಾರೆ. ಇಬ್ಬರು ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ಆರಂಭಿಸಿದೆ. ಆರೋಪಿಗಳ ವಿರುದ್ಧ ಪೊಲೀಸರು ಶಸ್ತಾçಸ್ತç ಕಾಯ್ದೆಯಡಿ ಮತ್ತು ಅರಣ್ಯ ಇಲಾಖೆಯಿಂದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ
ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ ಆನೆ ಸತ್ತು ಬಿದ್ದಿರುವ ಜಾಗದಲ್ಲಿ ಗುಂಡಿನ ಕಾಟ್ರೇಜ್ಗಳು ಕೂಡ ಸಿಕ್ಕಿದ್ದು, ಇದರಿಂದ ಯಾರು ಆನೆಯನ್ನು ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಸುಲಭವಾಗಲಿದೆ. ಅನುಮಾನ ವ್ಯಕ್ತಪಡಿಸಿರುವ ಇಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು ಅರಣ್ಯ ಇಲಾಖೆ ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಹತ್ಯೆಯಾಗಿರುವ ಆನೆಯನ್ನು ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಆನೆಗೆ ಎರಡು ಸುತ್ತಿನ ಗುಂಡು ಹಾರಿಸಲಾಗಿದ್ದು, ಇದು ಉದ್ದೇಶ ಪೂರ್ವಕವಾಗಿಯೇ ಗುಂಡು ಹೊಡೆದು ಹತ್ಯೆ ಮಾಡಿರುವುದು ಎಂಬ ಶಂಕೆ ಇದೆ. ಒಂದು ಗುಂಡು ಆನೆಯ ತಲೆಗೆ ಸರಿಯಾಗಿ ಬಿದ್ದಿದ್ದರೆ, ಮತ್ತೊಂದು ಗುಂಡು ಕುತ್ತಿಗೆಗೆ ಹೊಕ್ಕಿದೆ. ಹೀಗಾಗಿ ಆನೆ ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿ ಶಿವರಾಮ್ ಬಾಬು ತಿಳಿಸಿದ್ದಾರೆ.
ಆನೆ 10 ತಿಂಗಳ ಗರ್ಭಿಣಿಯಾಗಿತ್ತು ಎನ್ನುವುದು ಮರಣೋತ್ತರ ಪರೀಕ್ಷೆ ವೇಳೆ ಗೊತ್ತಾಗಿದೆ. ಇನ್ನು ಕೆಲವು ತಿಂಗಳು ಕಳೆದಿದ್ದರೆ ಆನೆ ಮರಿಯೊಂದಕ್ಕೆ ಜೀವ ನೀಡುತಿತ್ತು. ಆನೆ ಮೃತಪಟ್ಟಿದ್ದರಿಂದ ಹೊಟ್ಟೆಯಲ್ಲಿದ್ದ ಮರಿಯೂ ಕಣ್ಬಿಡುವುದಕ್ಕೂ ಮುನ್ನವೇ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ಬಳಿಕ ಅಲ್ಲಿಯೇ ಆನೆ ಶವ ಸಂಸ್ಕಾರ ಮಾಡಲಾಗಿದೆ.