ಮೈಸೂರು: ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಗರಿಷ್ಠ ಮಟ್ಟ 124.80 ಅಡಿ ಇರುವ ಜಲಾಶಯದ ಮಟ್ಟ 100 ಅಡಿಗೆ ತಲುಪಿದೆ.
ಕೆಆರ್ಎಸ್ ಜಲಾಶಯ ಮಂಗಳವಾರ ಬೆಳಿಗ್ಗೆ 8 ಗಂಟೆ ವೇಳೆಗೆ 100 ಅಡಿ ತಲುಪಿದೆ. 24 ಗಂಟೆಯೊಳಗೆ ಜಲಾಶಯಕ್ಕೆ 5 ಅಡಿ ನೀರು ಹರಿದು ಬಂದಿದೆ. 48,025 ಕ್ಯುಸೆಕ್ ಒಳಹರಿವು, 5,449 ಕ್ಯುಸೆಕ್ ಹೊರಹರಿವು ದಾಖಲಾಗಿದೆ.
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ನದಿಗೆ ನೀರು ಹರಿಸಲಾಗಿದೆ. 2859 ಅಡಿ ಗರಿಷ್ಠ ಮಟ್ಟದ ಹಾರಂಗಿಯಲ್ಲಿ 2855.01 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಭಾನುವಾರ ರಾತ್ರಿ ವೇಳೆಗೆ ಜಲಾಶಯಕ್ಕೆ 23,720 ಕ್ಯೂಸೆಕ್ನಷ್ಟು ಒಳಹರಿವಿದ್ದು, 35,000 ಕ್ಯೂಸೆಕ್ ಹೊರಬಿಡಲಾಗಿದೆ. ಇದರಿಂದ ಮಂಡ್ಯ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯಲ್ಲಿ ಒಣಗುತ್ತಿರುವ ಬೆಳೆಗೆ ನೀರು ಸಿಗಲಿದ್ದು, ರೈತರು ಸಂತಸಗೊAಡಿದ್ದಾರೆ.
ಕಾವೇರಿ ಉಗಮಸ್ಥಾನ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮ ಭರ್ತಿಯಾಗಿದೆ. ತ್ರಿವೇಣಿ ಸಂಗಮದ ಸ್ನಾನಘಟ್ಟ ಮುಳುಗಡೆಯಾಗಿದ್ದು, ಮಡಿಕೇರಿ-ಭಾಗಮಂಡಲ, ನಾಪೋಕ್ಲು -ಭಾಗಮಂಡಲ ರಸ್ತೆಯ ಮೇಲೆ ಪ್ರವಾಹ ಹರಿಯುತ್ತಿದೆ. ಈ ಭಾಗದ ಗದ್ದೆಗಳೆಲ್ಲಾ ಜಲಾವೃತವಾಗಿವೆ.
ಕಬಿನಿ ಜಲಾಶಯಕ್ಕೆ ಒಳ ಹರಿವು 20,640 ಕ್ಯೂಸೆಕ್ಗೆ ಏರಿದ್ದು, ಜಲಾಶಯದ ಮಟ್ಟ 2279.25 ಅಡಿ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ ಆಗಿದ್ದು, ಜಲಾಶಯ ಸಂಪೂರ್ಣ ಭರ್ತಿಯಾಗಲು ಇನ್ನು ಕೇವಲ 4.5 ಅಡಿ ನೀರು ಬರಬೇಕಿದೆ.