ಬೆಂಗಳೂರು: ಚಂದ್ರಯಾನ – 3 ಯೋಜನೆಯ ಯಶಸ್ಸಿನಿಂದ ಬೀಗುತ್ತಿರುವ ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋ, ತನ್ನ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದೆ. ಚಂದ್ರನ ಅಧ್ಯಯನ ಯಶಸ್ವಿಯಾಗಿ ಸಾಗುತ್ತಿರುವ ಬೆನ್ನಲ್ಲೇ, ಸೂರ್ಯನ ಅಧ್ಯಯನಕ್ಕೆ ಗಗನ ನೌಕೆ ತೆರಳಲಿದೆ. ಆದಿತ್ಯ ಎಲ್1 ಗಗನ ನೌಕೆಯನ್ನು ಹೊತ್ತ ಪಿಎಸ್ಎಲ್ವಿ ರಾಕೆಟ್ ಇದೇ ಶನಿವಾರ ಸೆಪ್ಟೆಂಬರ್ 1 ರಂದು ನಭಕ್ಕೆ ಚಿಮ್ಮಲಿದೆ. ಬೆಳಗ್ಗೆ 11.50ಕ್ಕೆ ಶ್ರೀಹರಿ ಕೋಟಾದಿಂದ ರಾಕೆಟ್ ಉಡಾವಣೆ ಆಗಲಿದೆ.
ಸೂರ್ಯನ ಅಧ್ಯಯನಕ್ಕಾಗಿ ಭಾರತ ಇದೇ ಮೊದಲ ಬಾರಿಗೆ ಗಗನ ನೌಕೆಯೊಂದನ್ನು ರವಾನಿಸುತ್ತಿದೆ. ಭಾರತ ರವಾನಿಸುವ ನೌಕೆ ಸೂರ್ಯನ ಸಮೀಪಕ್ಕೆ ಹೋಗೋದಿಲ್ಲ. ಬದಲಿಗೆ ಭೂಮಿ ಹಾಗೂ ಸೂರ್ಯನ ನಡುವೆ ನೆಲೆ ನಿಂತು ಕಾರ್ಯ ನಿರ್ವಹಿಸಲಿದೆ.
ಭೂಮಿಯಿಂದ ಸೂರ್ಯನ ದೂರ 15 ಕೋಟಿ ಕಿಲೋ ಮೀಟರ್. ಶ್ರೀಹರಿ ಕೋಟಾದಿಂದ ಇಸ್ರೋ ರವಾನಿಸುವ ಪಿಎಸ್ಎಲ್ವಿ ರಾಕೆಟ್, ಆದಿತ್ಯ ಎಲ್1 ಗಗನ ನೌಕೆಯನ್ನು ಭೂಮಿಯ ಹೊರ ಕಕ್ಷೆಗೆ ತಲುಪಿಸಲಿದೆ. ನಂತರ ಈ ಗಗನ ನೌಕೆಯು ಭೂಮಿಯಿಂದ 15 ಲಕ್ಷ ಕಿ. ಮೀ. ದೂರಕ್ಕೆ ಸಾಗಲಿದೆ. ಇಲ್ಲಿ ಭೂಮಿಯ ಗುರುತ್ವಾಕರ್ಷಣೆ ಹಾಗೂ ಸೂರ್ಯನ ಗುರುತ್ವಾಕರ್ಷಣೆ ಸಮ ಪ್ರಮಾಣದಲ್ಲಿ ಇರಲಿದೆ. ಅಂದರೆ ಇಲ್ಲಿಗೆ ರವಾನೆಯಾಗುವ ಗಗನ ನೌಕೆಯು ಸಮಾನ ಗುರುತ್ವಾಕರ್ಷಣೆಯಿಂದಾಗಿ ಸ್ಥಿರವಾಗಿ ನಿಲ್ಲಲಿದೆ. ಇದಕ್ಕೆ ಬಾಹ್ಯಾಕಾಶ ವಿಜ್ಞಾನದಲ್ಲಿ ಲಗ್ರಾಂಜಿಯನ್ ಪಾಯಿಂಟ್ ಎನ್ನಲಾಗುತ್ತದೆ. ಈ ಪೈಕಿ ಲಗ್ರಾಂಜಿಯನ್ ಪಾಯಿಂಟ್ 1ರಲ್ಲಿ ಆದಿತ್ಯ ನೌಕೆ ನೆಲೆ ನಿಲ್ಲುವ ಕಾರಣ ಈ ಯೋಜನೆಗೆ ಆದಿತ್ಯ ಎಲ್ 1 ಎಂದೇ ಹೆಸರಿಡಲಾಗಿದೆ.
ಲಗ್ರಾಂಜಿಯನ್ ಪಾಯಿಂಟ್ನಲ್ಲಿ ನೌಕೆಯನ್ನು ಸ್ಥಿರಗೊಳಿಸಿದರೆ ನಿರಂತರವಾಗಿ ಸೂರ್ಯನ ಅಧ್ಯಯನ ನಡೆಸಲು ಸಹಕಾರಿ ಆಗಲಿದೆ. ಗ್ರಹಣ ಸೇರಿದಂತೆ ಯಾವುದೇ ಸಮಸ್ಯೆಗಳೂ ಎದುರಾಗೋದಿಲ್ಲ. ಸೂರ್ಯನ ಮೇಲೆ ನಡೆಯುವ ಚಟುವಟಿಕೆಗಳ ನಿರಂತರ ಅಧ್ಯಯನಕ್ಕೆ ಇಸ್ರೋದ ಈ ಯೋಜನೆ ಸಹಕಾರಿಯಾಗಿದೆ.
ಸೂರ್ಯನ ಮೇಲ್ಮೆöÊ, ಸೂರ್ಯನ ವಿವಿಧ ಪದರಗಳು, ವಿದ್ಯುತ್ ಕಾಂತೀಯ ವಲಯ ಸೇರಿದಂತೆ ಹಲವು ಅಧ್ಯಯನಗಳನ್ನು ನಡೆಸಲು ಆದಿತ್ಯ ಎಲ್ 1 ಯೋಜನೆ ಅಡಿ ಕಾರ್ಯತಂತ್ರ ರೂಪಿಸಲಾಗಿದೆ. ಈ ಪೈಕಿ ಗಗನ ನೌಕೆಯಲ್ಲಿ ಇರುವ ನಾಲ್ಕು ಪೇಲೋಡ್ಗಳು ನೇರವಾಗಿ ಸೂರ್ಯನ ವೀಕ್ಷಣೆ ನಡೆಸಿದರೆ, ಮಿಕ್ಕ 3 ಪೇ ಲೋಡ್ಗಳು ಲಗ್ರಾಂಜಿಯನ್ ಪಾಯಿಂಟ್ 1 ರಲ್ಲಿ ಕಣಗಳ ಅಧ್ಯಯನ ಸೇರಿದಂತೆ ಹಲವು ಚಟುವಟಿಕೆ ನಡೆಸಲಿವೆ.
ಸೂರ್ಯನ ಹೊರ ವಲಯವನ್ನು ಕರೋನಾ ಎನ್ನಲಾಗುತ್ತದೆ. ಇದರ ಅಧ್ಯಯನಕ್ಕೆ ಆದಿತ್ಯ ಎಲ್ 1 ಯೋಜನೆ ಸಾಕಷ್ಟು ನೆರವಾಗಲಿದೆ ಎಂದು ಇಸ್ರೋ ಹೇಳಿದೆ. ಸೌರ ಮಾರುತಗಳು, ವಿದ್ಯುತ್ ಕಾಂತೀಯ ಪ್ರಭಾವಗಳು, ಇದರಿಂದ ಸೌರ ಮಂಡಲದ ಮೇಲಾಗುವ ಪರಿಣಾಮ, ಭೂಮಿಯ ವಾತಾವರಣದ ಮೇಲೆ ಉಂಟಾಗುವ ಪ್ರಭಾವಗಳ ಕುರಿತಾಗಿ ಅಧ್ಯಯನ ನಡೆಯಲಿದೆ. ಈ ಮೂಲಕ ಇಸ್ರೋ ಸೂರ್ಯನ ಕುರಿತಾದ ಮಹತ್ವದ ಮಾಹಿತಿಗಳನ್ನು ಕಲೆ ಹಾಕಲಿದೆ.