ಮೈಸೂರು: ಕೇಂದ್ರ ಸರ್ಕಾರದಿಂದ ಅಧಿಕಾರಿಗಳ ದುರ್ಬಳಕೆಯಾಗಿದ್ದು, ನಿನ್ನೆ ಮೈಸೂರು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಮೈಸೂರಿನಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆರೋಪಿಸಿದರು.
ನಗರದ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಚಾರಕ್ಕಾಗಿ ಅಧಿಕಾರಿಗಳ ನಿಯೋಜನೆ ಮಾಡಲಾಗಿದ್ದು, 250ರಿಂದ 300 ಅಧಿಕಾರಿಗಳ ದುರ್ಬಳಕೆ ಮಾಡಲಾಗಿದೆ. ಮೈಸೂರಲ್ಲಿ ನಿನ್ನೆ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯಪಾಲರು, ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು. ಇಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ. ಮುಖ್ಯಮಂತ್ರಿ ಕಚೇರಿಗೂ ಈ ಕಾರ್ಯಕ್ರಮದ ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾದ ನನಗೂ ಮಾಹಿತಿ ಇಲ್ಲ. ಈ ಮೂಲಕ ಗಣತಂತ್ರ ವ್ಯವಸ್ಥೆ ದುರ್ಬಲಗೊಳಿಸಲಾಗುತ್ತಿದೆ. ಆಡಳಿತ ವೈಫಲ್ಯಗಳನ್ನು ಮರೆ ಮಾಚಲಾಗಿದೆ. ಅಖಿಲ ಭಾರತ ಸೇವೆಯ ಅಧಿಕಾರಿಗಳು ಹಿತಾಸಕ್ತಿಯ ಪರವಾಗಿ ಕೆಲಸ ಮಾಡಬಾರದು ಎಂದರು.
ಕೇಂದ್ರ ಸರ್ಕಾರ ಚುನಾವಣೆಗಾಗಿ ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅನೇಕ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನವಿರುತ್ತದೆ. ರಾಜ್ಯ ಸರ್ಕಾರವನ್ನ ಕಡೆಗಣಿಸಿ ಕೇಂದ್ರ ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದೆ.
ಇದು ಗಣತಂತ್ರ ವ್ಯವಸ್ಥೆಗೆ ವಿರುದ್ಧವಾದದ್ದು.
ಬಿರ್ಸಾ ಮುಂಡಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ವಿಚಾರವಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತೇನೆಂದರು.
ಗೊತ್ತಿಲ್ಲ: ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಯಿಸಿ, ನಾನು ನೋಡೂ ಇಲ್ಲ, ಕೇಳೂ ಇಲ್ಲ, ನನಗೆ ಗೊತ್ತೇ ಇಲ್ಲ ಎಂದು ಹಾರಿಕೆಯ ಉತ್ತರ ನೀಡಿದರು. ವರ್ಗಾವಣೆ ಮಾಡೋದು ಮುಖ್ಯಮಂತ್ರಿಯವರ ಪರಮಾಧಿಕಾರವಾಗಿದೆ. ಬರೋಬ್ಬರಿ ಆರು ಬಾರಿ ಒಂದೇ ಹೇಳಿಕೆ ಪುನರುಚ್ಛರಿಸಿದರು. ಯಾರು ಏನೇ ಹೇಳಬಹುದು.
ವರ್ಗಾವಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲ. ಆ ರೀತಿ ಪ್ರಕರಣ ನಡೆದಿದ್ದರೆ
ಕಾನೂನು ತನ್ನ ಕ್ರಮ ನಿರ್ವಹಿಸುತ್ತದೆ ಎಂದು ಹೇಳಿದರು.