ಬೆಂಗಳೂರು: ಕೊರೊನಾ ಬಳಿಕ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟವಾಗಿ ಅನೇಕರು ನಾನಾ ಮಾರ್ಗಗಳನ್ನು ಹಿಡಿದಿದ್ದಾರೆ. ಇದೇ ನಿಟ್ಟಿನಲ್ಲಿ ಎಂಬಿಬಿಎಸ್ ಪಾಸ್ ಆಗದಿದ್ದರೂ ಅದೆಷ್ಟೋ ಮಂದಿ ಕೊರೊನಾ ಬಳಿಕ ಕ್ಲಿನಿಕ್ ಓಪನ್ ಮಾಡಿ ಚಿಕಿತ್ಸೆ ಕೊಟ್ಟು ಅಪಾಯ ತಂದುಕೊಂಡಿರುವ ಬಗ್ಗೆ ಈ ಹಿಂದಿನಿಂದಲೂ ಅನೇಕ ವರದಿಗಳು, ಸುದ್ದಿಗಳು ಹರಿದಾಡುತ್ತಿವೆ . ಇದೀಗ ನಕಲಿ ವೈದ್ಯರು ಹಾಗೂ ನಕಲಿ ಕ್ಲಿನಿಕ್ಗಳ ಬಗ್ಗೆ ದೂರುಗಳು ಬರುತ್ತಿದ್ದು ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಸದ್ಯ 1434ಕ್ಕೂ ಹೆಚ್ಚು ನಕಲಿ ವೈದ್ಯರ ಮೇಲೆ ಕೇಸ್ ದಾಖಲಾಗಿದೆ.
ಕೊರೊನಾ ಬಳಿಕ ನಕಲಿ ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ರಾಜ್ಯದಲ್ಲಿ 1500ಕ್ಕೂ ಹೆಚ್ಚು ನಕಲಿ ವೈದ್ಯರಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಆರೋಗ್ಯ ಇಲಾಖೆಗೆ ದೂರುಗಳ ಸುರಿಮಳೆಯಾಗಿದ್ದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಸಮರ ಸಾರಿದೆ. ಸದ್ಯ 1434ಕ್ಕೂ ಹೆಚ್ಚು ನಕಲಿ ವೈದ್ಯರ ಮೇಲೆ ಆರೋಗ್ಯ ಇಲಾಖೆ ಕೇಸ್ ದಾಖಲಿಸಿದೆ. ಈ ನಕಲಿ ವೈದ್ಯರು ಗಡಿ ಭಾಗದಲ್ಲಿ ಹೆಚ್ಚು ಕ್ಲಿನಿಕ್ಗಳನ್ನು ಓಪನ್ ಮಾಡುತ್ತಿದ್ದಾರೆ.
ಹೊರ ರಾಜ್ಯಗಳಿಂದ ಬಂದು ಗಡಿ ಜಿಲ್ಲೆಗಳಲ್ಲಿ ಮೊಬೈಲ್ ಕ್ಲಿನಿಕ್ ಮೂಲಕ ರಾಜ್ಯದ ಜನರಿಗೆ ಈ ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಹೊಸೂರು ಹಾಗೂ ಆನೇಕಲ್ ಭಾಗದಲ್ಲಿ ಮೊಬೈಲ್ ಕ್ಲಿನಿಕ್ ಇಟ್ಟುಕೊಂಡು ಚಿಕಿತ್ಸೆ ನೀಡಿ ಜನರ ಪ್ರಾಣಕ್ಕೆ ಅಪಾಯ ತರುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ಹಿಂದೆ ಮುಂದೆ ತಿಳಿಯದೆ. ವೈದ್ಯರ ಪ್ರಮಾಣ ಪತ್ರ ಹಾಗೂ ಆಸ್ಪತ್ರೆಗಳ ಪ್ರಮಾಣಿಕೃತ ಪತ್ರ ನೋಡದೆ ಚಿಕಿತ್ಸೆ ಪಡೆದು ಸಮಸ್ಯೆಗೆ ತುತ್ತಾಗದ್ದಂತೆ ಸೂಚನೆ ನೀಡಿದೆ.
ಈ ನಕಲಿ ಕ್ಲಿನಿಕ್ ಹಾಗೂ ವೈದ್ಯರ ಹೆಡಮೂರಿ ಕಟ್ಟಲು ಆರೋಗ್ಯ ಇಲಾಖೆ ಮುಂದಾಗಿದ್ದು ಸದ್ಯ 1434 ನಕಲಿ ವೈದ್ಯರ ಕ್ಲಿನಿಕ್ಗಳನ್ನು ಲಾಕ್ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ 300ಕ್ಕೂ ಹೆಚ್ಚು ನಕಲಿ ವೈದ್ಯರು ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಡಿಸೆಂಬರ್ ಕೊನೆಯ ವೇಳೆಗೆ ನಕಲಿ ವೈದ್ಯರು ಹಾಗೂ ಕ್ಲಿನಿಕ್ ಗೆ ಬೀಗ ಹಾಕಲು ಮುಂದಾಗಿದೆ.