ಮಂಡ್ಯ : ಅಪಘಾತ ನಡೆದ ಸ್ಥಳದಲ್ಲಿ ಸಿಕ್ಕಿದ ಚಿನ್ನದ ಬಳೆ, ನಗದು ಇದ್ದ ಪರ್ಸ್ಅನ್ನು ಮೃತ ಮಹಿಳೆಯರ ಕುಟುಂಬಕ್ಕೆ ಹಿಂದಿರುಗಿಸುವ ಮೂಲಕ ಮೈಸೂರಿನ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮರೆದಿದ್ದಾರೆ.
ಮೈಸೂರಿನ ಎಚ್ಪಿಒ ಮತ್ತು ಆರ್ಎಂಎಸ್ ಲೇಔಟ್ನ ನಿವಾಸಿ ಲೋಕೇಶ್ಕುಮಾರ್ ಪ್ರಾಮಾಣಿಕತೆ ಮೆರೆದಿರುವ ಆಟೋ ರಿಕ್ಷಾ ಚಾಲಕ. ಮೃತ ಮಹಿಳೆ ಮಂಡ್ಯ ತಾಲೂಕು ಹೊನಗಾನಹಳ್ಳಿ ಗ್ರಾಮದ ವೈ.ಆರ್.ಗೀತಾ ಅವರ ಕುಟುಂಬದವರು ಕಳೆದುಕೊಂಡಿದ್ದ ಚಿನ್ನಭರಣಗಳನ್ನು ವಾಪಸ್ ಪಡೆದುಕೊಂಡಿದ್ದಾರೆ.
5,000 ರೂ. ಬಹುಮಾನ
ಚಿನ್ನಾಭರಣ, ನಗದನ್ನು ವಾರಸುದಾರರಿಗೆ ವಾಪಸ್ ನೀಡಿದ ಆಟೋ ಚಾಲಕನಿಗೆ ನಿವೃತ್ತ ತಹಸೀಲ್ದಾರ್ ಸ್ವಾಮಿಗೌಡ ಅವರು 5000ರೂ. ಬಹುಮಾನ ನೀಡಿ ಶಹಬ್ಬಾಸ್ಗಿರಿ ನೀಡಿದ್ದಾರೆ.
ನಿವೃತ್ತ ತಹಸೀಲ್ದಾರ್ ಮಂಡ್ಯದ ಸ್ವಾಮಿಗೌಡ ಅವರ ಪುತ್ರಿ ಪ್ರಕೃತಿ ಅನಾರೋಗ್ಯದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ನೋಡಲೆಂದು ಕಳೆದ ಜು.9ರಂದು ಮಣಿಪಾಲ್ ಆಸ್ಪತ್ರೆಗೆ ಬಂದಿದ್ದ ವೈ.ಆರ್.ಗೀತಾ ಅವರು ಮೈಸೂರಿನ ವಸಂತನಗರದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ ಸಂಜೆ 5.30ರ ಸಮಯದಲ್ಲಿ ರಿಂಗ್ ರಸ್ತೆಯ ವಿಟಿಯು ಕಾಲೇಜು ಬಳಿ ಆಕಸ್ಮಿಕವಾಗಿ ಪೊಲೀಸ್ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದರು. ಈ ಸಮಯದಲ್ಲಿ ಚಿನ್ನದ ಬಳೆ ಹಾಗೂ ಹಣವಿದ್ದ ಪರ್ಸ್ ಕೆಳಗೆ ಬಿದ್ದು ಬ್ಯಾರಿಕೇಡ್ನೊಳಗೆ ಸೇರಿಕೊಂಡಿತ್ತು. ಸಾಮಾನ್ಯವಾಗಿ ಕೆಳಗೆಬಿದ್ದಿದ್ದ ಬ್ಯಾರಿಕೇಡ್ಗಳನ್ನು ರಾತ್ರಿ ಸಮಯದಲ್ಲಿ ಆಟೋಚಾಲಕರು ಅಥವಾ ಆ ಮಾರ್ಗದಲ್ಲಿ ಸಾಗುವವರು ಎತ್ತಿ ನಿಲ್ಲಿಸುತ್ತಾರೆ. ಹೀಗೆ ಎತ್ತಿ ನಿಲ್ಲಿಸುವ ಸಮಯದಲ್ಲಿ ಆಟೋ ಚಾಲಕ ಲೋಕೇಶ್ಕುಮಾರ್ ಅವರಿಗೆ ಬ್ಯಾರಿಕೇಡ್ ಪಕ್ಕದಲ್ಲೇ ಬಿದ್ದಿದ್ದ ಪರ್ಸ್ ಸಿಕ್ಕಿದೆ. ಅದರೊಳಗಿದ್ದ ವಿಳಾಸವನ್ನು ಪತ್ತೆ ಮಾಡಿದಾಗ ಮೃತ ಮಹಿಳೆಯ ಕುಟುಂಬದವರ ಸಂಪರ್ಕ ದೊರಕಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೈ.ಆರ್.ಗೀತಾ ಅವರ ಮೆದುಳು ನಿಷ್ಕಿçಯಗೊಂಡು ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆ ಹೊನಗಾನಹಳ್ಳಿ ಗ್ರಾಮದಲ್ಲಿ ನೆರವೇರಿತ್ತು. ಶನಿವಾರ (ಆ.12) ಮಂಡ್ಯದ ವಿ.ವಿ.ನಗರದಲ್ಲಿರುವ ನಿವೃತ್ತ ತಹಸಿಲ್ದಾರ್ ಸ್ವಾಮಿಗೌಡರ ನಿವಾಸಕ್ಕೆ ಆಟೋ ಚಾಲಕ ಲೋಕೇಶ್ಕುಮಾರ್ ಆಗಮಿಸಿ 40 ಗ್ರಾಂ ತೂಕದ ಚಿನ್ನದ ಬಳೆಗಳು (2 ಲಕ್ಷದ ಮೌಲ್ಯದ), 2 ಸಾವಿರ ರೂ. ನಗದು ಹಣ ವಾಪಸ್ ನೀಡಿ ಪ್ರಮಾಣಿಕತೆ ಮರೆದರು. ಈ ಸಮಯದಲ್ಲಿ ಮೃತ ಮಹಿಳೆ ಗೀತಾ ಅವರ ಪತಿ ವೈ.ಎಸ್.ರಾಜಣ್ಣ, ಪುತ್ರ ದೃಶ್ಯಂತ್ಗೌಡ, ಮಗಳು ಐಶ್ವರ್ಯ ಇತರರು ಹಾಜರಿದ್ದರು.
2 ಲಕ್ಷದ ಚಿನ್ನದ ಬಳೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
