ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದ್ಯುತ್ ಪ್ರಸರಣ ಜಾಲದ ನಿರ್ವಹಣೆ ಪ್ರಕ್ರಿಯೆ ಮೂರ್ನಾಲ್ಕು ತಿಂಗಳು ಹಳಿ ತಪ್ಪಿದ ಕಾರಣ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಗಾಲದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಪರಿಸ್ಥಿತಿ ಎದುರಾಗಿದೆ.
ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಇಲಾಖೆಯ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಬದಿಗಿಟ್ಟು ಮೂರ್ನಾಲ್ಕು ತಿಂಗಳು ವಿಧಾನಸಭಾ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದರು. ಹೀಗಾಗಿ, ಸಿಬ್ಬಂದಿಗೆ ವಿದ್ಯುತ್ ಪ್ರಸರಣ ಜಾಲದ ನಿರ್ವಹಣೆ ಮತ್ತು ಮಳೆಗಾಲದ ಪೂರ್ವ ಸಿದ್ಧತೆಯತ್ತ ಗಮನಹರಿಸಲು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ರಾಜಧಾನಿಯಲ್ಲಿ ವಿದ್ಯುತ್ ಕಡಿತವಾಗುತ್ತಿದೆ. ನಿಗದಿತವಾಗಿ ಹಾಗೂ ನಿಗದಿತವಲ್ಲದೆ ಹಲವು ತಾಸುಗಳವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿದೆ. ಸಿಲಿಕಾನ್ ಸಿಟಿಯ ಜತೆಗೆ ರಾಜ್ಯದ ವಿವಿಧೆಡೆಯಲ್ಲೂಅನಿಯಮಿತವಾಗಿ ವಿದ್ಯುತ್ ಕಡಿತಗೊಳ್ಳುತ್ತಿದೆ.
ಬೆಸ್ಕಾಂ ವಾರಾಂತ್ಯದ ಲೋಡ್ ಶೆಡ್ಡಿಂಗ್
ನಗರ ವಾಸಿಗಳು ಕಳೆದ ಕೆಲ ದಿನಗಳಿಂದ ಅನಿಯಮಿತ ವಿದ್ಯುತ್ ಕಡಿತದಿಂದ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲೇ ಬೆಸ್ಕಾಂ ವಾರಾಂತ್ಯದ ದಿನಗಳಲ್ಲಿ ಲೋಡ್ ಶೆಡ್ಡಿಂಗ್ ಘೋಷಿಸಿದೆ. ಬೆಸ್ಕಾಂನ ಅಧಿಕೃತ ಮಾಹಿತಿ ಪ್ರಕಾರ ಜೂನ್ 9ರಿಂದ ಜೂನ್ 13ರ ನಡುವೆ ನಗರದ ಅರ್ಧದಷ್ಟು ಭಾಗದಲ್ಲಿ ದಿನವಿಡೀ ವಿದ್ಯುತ್ ಪೂರೈಕೆ ಕಡಿತಗೊಳ್ಳಲಿದೆ. ಮುಂದಿನ 5 ದಿನ ಈ ಸಮಸ್ಯೆ ಇರಲಿದೆ. ಸರಕಾರ ಉಚಿತ 200 ಯೂನಿಟ್ ವಿದ್ಯುತ್ ಯೋಜನೆ ಸೌಲಭ್ಯಕ್ಕೆ ವಿಧಿಸಿರುವ ಷರತ್ತುಗಳು ಈಗಾಗಲೇ ನಾಗರಿಕರಲ್ಲಿಅಸಮಾಧಾನ ಮೂಡಿಸಿದೆ. ಈ ಮಧ್ಯೆ ಬೆಸ್ಕಾಂ ಮನಸೋ ಇಚ್ಛೆ ಲೋಡ್ ಶೆಡ್ಡಿಂಗ್ ಮಾಡಿ ನಾಗರಿಕರ ತಾಳ್ಮೆ ಪರೀಕ್ಷಿಸುತ್ತಿದೆ.
3 ದಿನ ವಿದ್ಯುತ್ ವ್ಯತ್ಯಯ
ಮುಂದಿನ ಮೂರು ದಿನಗಳಲ್ಲಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಎಂಜಿನಿಯರ್ಗಳು ಪಶ್ಚಿಮ, ದಕ್ಷಿಣ, ಪೂರ್ವ ಮತ್ತು ಉತ್ತರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗದ ನಿಯಮಿತ ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳಲಿದ್ದಾರೆ. ಹೀಗಾಗಿ, ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಳೆಗಾಲಕ್ಕೂ ಮುನ್ನ ವಿದ್ಯುತ್ ಪ್ರಸರಣ ಜಾಲದಲ್ಲಿ ನಿಯಮಿತ ನಿರ್ವಹಣೆಯ ಅಗತ್ಯವಿರುತ್ತದೆ. ವಿದ್ಯುತ್ ಸ್ವೀಕರಣಾ ಮತ್ತು ವಿತರಣಾ ಕೇಂದ್ರಗಳಲ್ಲಿ ಕನಿಷ್ಠ 4 ತಿಂಗಳಿಗೊಮ್ಮೆ ಟ್ರಾನ್ಸ್ಫಾರ್ಮರ್ ಹಾಗೂ ಬ್ರೇಕರ್ಗಳಲ್ಲಿನ ತೈಲ, ಇತರೆ ಬಿಡಿ ಭಾಗಗಳನ್ನು ಬದಲಾಯಿಸಬೇಕು. ಆದರೆ, ಹೆಚ್ಚಿನ ಸಿಬ್ಬಂದಿ ಮತ್ತು ಎಂಜಿನಿಯರ್ಗಳು ಮೂರ್ನಾಲ್ಕು ತಿಂಗಳು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರಿಂದ ವಿದ್ಯುತ್ ಸ್ವೀಕರಣಾ ಹಾಗೂ ವಿತರಣಾ ಕೇಂದ್ರಗಳ ನಿರ್ವಹಣೆ ಸಾಧ್ಯವಾಗಿಲ್ಲ. ಈಗ ಮುಂಗಾರು ಪೂರ್ವ ನಿರ್ವಹಣೆಯ ಜತೆಗೆ ಅಕಾಲಿಕ ನಿರ್ವಹಣಾ ಕಾಮಗಾರಿಯೂ ಕಾರ್ಯ ಒತ್ತಡ ಹೆಚ್ಚಿಸಿದೆ’ ಎಂದು ತಿಳಿಸಿದ್ದಾರೆ.