ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಸಿಂಚನ ಮುಂದುವರಿಕೆಯಾಗಿದ್ದು, ರಾಜ್ಯದ ಕರಾವಳಿ ಸೇರಿದಂತೆ ಹಲವು ಭಾಗಗಳಲ್ಲಿ ವರುಣಾರ್ಭಟ ಮುಂದುವರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನಿಡಿದೆ.
ಇಂದಿನಿಂದ ನಾಲ್ಕು ದಿನಗಳ ಕಾಲ ಭಾರೀ ಮಳೆ ಮುನ್ಸೂಚನೆ ಸಿಕ್ಕಿದ್ದು, ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಮುಂದುವರಿಕೆಯಾಗಿದೆ. ಇನ್ನು ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ದಕ್ಷಿಣ ಒಳನಾಡಿನ ಮಲೆನಾಡು ಭಾಗದ ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ ಜಿಲ್ಲೆಗಳಿಗೆ ಆರೆಂಜ್, ಧಾರವಾಡ, ಕಲಬುರಗಿ, ರಾಯಚೂರು ಹಾಗೂ ಗದಗ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಪ್ರದೇಶಗಳಲಿ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಇಂದು ಮತ್ತು ಶುಕ್ರವಾರ ಮೊಡಕವಿದ ವಾತಾವರಣ ಇರಲಿದ್ದು, ಇಂದು ಮತ್ತು ನಾಳೆ ಗುಡುಗು ಮಿಂಚಿನ ಸಮೇತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟುಬಿಡದೆ ಮುಂಗಾರು ಮಳೆ ಸುರಿಯುತ್ತಿದೆ. ನದಿಗಳೆಲ್ಲ ತುಂಬಿ ಹರಿಯುತ್ತಿದೆ. ಇಂದ್ರಾಣಿ ನದಿ ಕೃಷ್ಣ ಮಠದ ಪಾಕಿರ್ಂಗ್ ಏರಿಯಾ ಕೆ ನುಗ್ಗಿದೆ. ಮಹಾಮಳೆ ಪ್ರವಾಸಿಗರಿಗೆ ವ್ಯಾಪಾರಿಗಳಿಗೆ ತಲೆನೋವು ತಂದಿದೆ. ಕಾರು, ಬೈಕುಗಳು ನೀರಿನಲ್ಲೇ ಸಂಚರಿಸುವ ಸ್ಥಿತಿ ಉಂಟಾಗಿದೆ. ಹೀಗಾಗಿ ಪಾಕಿರ್ಂಗ್ ನಿರ್ವಹಣೆ ಮಾಡುವ ಕೃಷ್ಣ ಮಠದ ಟ್ರಸ್ಟ್ ವಿರುದ್ಧ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಮೂರನೇ ದಿನವಾದ ಇಂದು ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.