ಮೈಸೂರು: ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದೆ. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ನಾವು 120 ಕ್ಕಿಂತ ಹೆಚ್ಚು ಸ್ಥಾನ ಗೆದ್ದುಕೊಂಡು ಬರುತ್ತೇವೆ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಲೆಕ್ಕಾಚಾರದಂತೆ ನಾವು ಮುನ್ನಡೆ ಸಾಧಿಸಿದ್ದೇವೆ. 120ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರುಣದಲ್ಲೂ ನಾವು ಮುನ್ನಡೆ ಸಾಧಿಸಿದ್ದು, ಸೋಮಣ್ಣ ಸೋಲುತ್ತಾರೆ. ಅವರಿಗೆ ವರುಣ ಮಾತ್ರವಲ್ಲದೇ ಚಾಮರಾಜನಗರದಲ್ಲೂ ಸೋಲು ಖಚಿತವಾಗಿದೆ ಎಂದರು.
ನಾನು ಮೊದಲೇ ಹೇಳಿದಂತೆ ರ್ನಾಟಕಕ್ಕೆ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಎಷ್ಟೇ ಬಾರಿ ಬಂದರೂ ಅದು ಮತದಾರರ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಏಕೆಂದರೆ ಜನರು ಬಿಜೆಪಿ ವಿರುದ್ಧ ಬೇಸತ್ತಿದ್ದಾರೆ. ಅವರ ಭ್ರಷ್ಟಾಚಾರ, ದುರಾಡಳಿತ, ಜನವಿರೋಧಿ ನೀತಿಯಿಂದ ಜನರು ಬದಲಾವಣೆ ಬಯಸಿದ್ದಾರೆ. ಇದೀಗ ಜನರು ಅದಕ್ಕೆ ತಕ್ಕಂತೆ ತರ್ಪು ನೀಡುತ್ತಿದ್ದಾರೆ ಎಂದು ಹೇಳಿದರು.