ಶಿರಸಿ: ಬಿಜೆಪಿ ಮೊದಲ ಪಟ್ಟಿಯಲ್ಲಿ ಶಿರಸಿ ಸಿದ್ದಾಪುರ ಕ್ಷೇತ್ರದ ಹಾಲೀ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಟಿಕೆಟ್ ಪಡೆಯುವಲ್ಲಿ ನಿರೀಕ್ಷೆಯಂತೆ ಸಫಲವಾಗಿದ್ದಾರೆ.
ದೆಹಲಿಯಲ್ಲಿ ನಡೆದ ಬಿಜೆಪಿ ವರಿಷ್ಠರ ಸಭೆಯಲ್ಲಿ ಟಿಕೆಟ್ ಘೋಷಿಸಲಾಯಿತು. 6 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋಲಿಲ್ಲದ ಸರದಾರರಾಗಿರುವ ಕಾಗೇರಿಗೆ 7 ಬಾರಿ ಟಿಕೆಟ್ ಲಭಿಸಿದಂತಾಗಿದೆ.
ಕಾಗೇರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಿಂದ ಬೆಳೆದು ಬಂದವರು. ರಾಜಕೀಯ ಹಿನ್ನಲೆ ಇಲ್ಲದೇ ಸಂಘ ಪರಿವಾರದ ಸಹಕಾರದಿಂದ ಮೊದಲು ಶಿರಸಿ ತಾಲ್ಲೂಕಿನ ಕೆಲ ಭಾಗ ಹಾಗೂ ಕರಾವಳಿಯ ಅಂಕೋಲಾ ತಾಲೂಕಗಳನ್ನು ಒಳಗೊಂಡಿದ್ದ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ 1994, 1999, ಹಾಗೂ 2004 ರಲ್ಲಿ ಬಿಜೆಪಿಯಿಂದ ಗೆದ್ದು ಬಂದಿದ್ದರು.
2008 ರ ಕ್ಷೇತ್ರ ಪುನರ್ ವಿಂಗಡನೆ ನಂತರ ಶಿರಸಿ, ಸಿದ್ದಾಪುರ ತಾಲ್ಲೂಕುಗಳನ್ನೊಳಗೊಂಡ ಕ್ಷೇತ್ರದಿಂದ ನಿರಂತರ ಮೂರು ಬಾರಿ ಆಯ್ಕೆಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ ಕಡಿಮೆಯಾಗಿತ್ತು. ಆದರೆ, 2018ರಲ್ಲಿ ಮೋದಿ ಅಲೆ ಹಾಗೂ ಜಿಲ್ಲೆಯಲ್ಲಿ ನಡೆದ ಕೋಮು ಸಂಘರ್ಷದ ಫಲ ಮತ ಹೆಚ್ಚಿಸಿಕೊಳ್ಳುವ ಚೇತರಿಕೆಗೆ ಕಾರಣವಾಗಿತ್ತು.
ಕ್ಷೇತ್ರದಲ್ಲಿ ಕಾಗೇರಿ ವಿರೋಧಿ ಅಲೆಯ ಕಾರಣ ಟಿಕೆಟ್ ಕೈತಪ್ಪುತ್ತದೆ ಎಂಬ ವಾದ ಬಲವಾಗಿತ್ತು. ಆದರೆ ಅದೆಲ್ಲವನ್ನೂ ಬದಿಗೊತ್ತಿ ಮತ್ತೊಮ್ಮೆ ಕಾಗೇರಿ ಟಿಕೆಟ್ ತರಲು ಸಫಲರಾಗಿದ್ದಾರೆ