ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆ ಇದ್ದರೂ, ಕುಡಿಯುವ ನೀರಿನ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಸಾಕಾಗುವಷ್ಟು ನೀರಿಲ್ಲ. ಇನ್ನೂ ಕೆಲವು ದಿನಗಳಲ್ಲಿ ನದಿ ಪ್ರದೇಶಗಳಲ್ಲಿ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದೂ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಪನ್ನು ನಾವು ಗೌರವಿಸಬೇಕು. ನಮ್ಮ ರಾಜ್ಯದಲ್ಲಿ ಸಮರ್ಪಕವಾದ ಮಳೆಯಾಗಿಲ್ಲ, ಆದರೂ ನಾವು ಪ್ರಾಧಿಕಾರದ ತೀರ್ಪನ್ನು ಗೌರವಿಸಬೇಕಿದೆ. ನಮ್ಮಲ್ಲಿರುವ ನೀರನ್ನು ಹರಿಸಲು ಚಿಂತನೆ ನಡೆಸಿದ್ದೇವೆ, ನಾವು ಪ್ರಾಧಿಕಾರದ ತೀರ್ಪನ್ನು ಗೌರವಿಸುತ್ತೇವೆ ಎಂದು ನೀರು ಬಿಡುವ ಕುರಿತು ಜಲ ಶಕ್ತಿ ಸಚಿವರಿಗೆ ತಮಿಳುನಾಡಿನ ಪತ್ರದ ಬಗ್ಗೆ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕುಡಿಯುವ ನೀರನ್ನು ಇಟ್ಟುಕೊಳ್ಳದೇ ನಾವು ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಕುಡಿಯುವ ನೀರನ್ನು ಗಮನದಲ್ಲಿಟ್ಟುಕೊಂಡು ನೀರು ಬಿಡಲು ಯೋಚಿಸುತ್ತೇವೆ. ಕಳೆದ 3 ವರ್ಷಗಳಲ್ಲಿ ಚೆನ್ನಾಗಿ ಮಳೆಯಾಗಿತ್ತು. ಆದರೆ ಈ ವರ್ಷ ಆಗಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪರ್ಯಾಯ ಯೋಜನೆ ಇದೆಯೇ? ಎಂದು ಕೇಳಿದ್ದಕ್ಕೆ ಸಂಕಟದ ಸಂದರ್ಭದಕ್ಕೆ ಒಂದು ಸೂತ್ರವಿದೆ, ನಾವು ಅದನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಕಾವೇರಿ ನೀರು ಹರಿಸದೇ ಇದ್ದರೆ, ಕಟಾವಿಗೆ ಬಂದಿರುವ ಕರುವೈ ಬೆಳೆ ಹಾಳಾಗುತ್ತದೆ ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಮಿಳುನಾಡು ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದಿತ್ತು.