ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಡಿಕೇರಿ – ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದೆ.
ಮಡಿಕೇರಿ ತಾಲೂಕಿನ ಮದೆನಾಡು ಸಮೀಪ ಕರ್ತೋಜೆಯಲ್ಲಿ ರಾತ್ರಿ ವೇಳೆ ಮರ ಸಹಿತ ಗುಡ್ಡ ಕುಸಿದಿದ್ದು ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.
ಹೆದ್ದಾರಿಯಲ್ಲಿ ಕೆಲಕಾಲ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಜೆಸಿಬಿ, ಹಿಟಾಚಿ ಯಂತ್ರ ಬಳಸಿ ರಸ್ತೆಯ ಒಂದು ಬದಿಯ ಮಣ್ಣು ಮತ್ತು ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ. ಕೊಯನಾಡು ಅರಣ್ಯ ಇಲಾಖೆ ಅಧಿಕಾರಿಗಳು, ಮಡಿಕೇರಿ ತಹಶಿಲ್ದಾರ್ ಸ್ಥಳದಲ್ಲಿ ಹಾಜರಾಗಿ ತೆರವು ಕಾರ್ಯ ನಡೆಸುತ್ತಿದ್ದಾರೆ.
ಭಾರೀ ಗಾಳಿ ಮಳೆ ಸುರಿಯುತ್ತಿರುವ ಹಿನ್ನೆಲೆ ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ಮಂಗಳವಾರವೂ ರಜೆ ಘೋಷಣೆ ಮಾಡಲಾಗಿದೆ. ಪರೀಕ್ಷೆ ಹಿನ್ನೆಲೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊರತುಪಡಿಸಿ ಜಿಲ್ಲೆಯ ಅಂಗನವಾಡಿ, ಶಾಲೆ, ಹಾಗೂ ಪಿಯು ಕಾಲೇಜಿಗೆ ಮಂಗಳವಾರವೂ ರಜೆ ಘೋಷಿಸಿ ಕೊಡಗು ಡಿಸಿ ವೆಂಕಟ್ ರಾಜ್ ಆದೇಶ ಹೊರಡಿಸಿದ್ದಾರೆ.