ಮೈಸೂರು: ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು, ಪ್ರಾಣ ತ್ಯಾಗ ಮಾಡಿದ ಸಂಗೋಳ್ಳಿ ರಾಯಣ್ಣರ ಹೋರಾಟ ಅವಿಸ್ಮರಣೀಯ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ನಗರದ ಕುರುಬಾರಹಳ್ಳಿಯ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಚಿವರು, ರಾಯಣ್ಣನ ಹೋರಾಟದ ಮಾದರಿಯಲ್ಲಿ ನಾವೆಲ್ಲರೂ ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕು ಎಂದು ಹೇಳಿದರು.
ನಾಯಕತ್ವದ ನಿಷ್ಟೆಗೆ, ಪ್ರಾಮಾಣಿಕತೆಗೆ, ನೆಲ, ಜಲ, ಭಾಷೆ ಮತ್ತು ಜನರ ರಕ್ಷಣೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದರು. ಗುಲಾಮಗಿರಿಯಿಂದ ನಮ್ಮ ಬಿಡುಗಡೆಗೊಳಿಸುವುದು ಬಿಟ್ಟು ಬೇರೆ ಯಾವುದೇ ಆಲೋಚನೆ ರಾಯಣ್ಣರಲ್ಲಿ ಇರಲಿಲ್ಲ ಎಂದು ಹೇಳಿದರು.
ಸಂಗೋಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯದ ಮಹಾನ್ ಹೋರಾಟಗಾರ. ಸಮಸ್ತ ನಾಡಿನ ಜನತೆಯ ಸ್ವಾತಂತ್ರ್ಯಕ್ಕಾಗಿ ತನ್ನನ್ನು ಮುಡಿಪಾಗಿಟ್ಟ ದೊಡ್ಡ ಸೇನಾನಿ. ಅಂತಹ ವೀರನ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿರುವುದು ಪ್ರಶಂಸನೀಯ ಎಂದರು.
ದೇಶಾದ್ಯಂತ ಮೈಸೂರಿಗೆ ಆಗಮಿಸಿ ಚಾಮುಂಡಿಬೆಟ್ಟಕ್ಕೆ ಬರುವ ಪ್ರವಾಸಿಗರು ಈ ವೃತ್ತದ ಮೂಲಕ ತೆರಳುವ ಸಂದರ್ಭದಲ್ಲಿ ಸಂಗೋಳ್ಳಿ ರಾಯಣ್ಣನ ಸ್ವಾತಂತ್ರ್ಯ ಸಂಗ್ರಾಮದ ಹೋರಾಟವನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಎಂದರು.
ನಮ್ಮದು ಬಹುತ್ವದ ದೇಶ. ಇಲ್ಲಿ ಬೇರೆ ಭಾಷೆ, ಆಚಾರ ವಿಚಾರಗಳು, ಧಾರ್ಮಿಕ ನಿಲುವುಗಳು ಮತ್ತು ಹಲವಾರು ಜಾತಿಗಳಿದ್ದರೂ ಅಂತಿಮವಾಗಿ ನಾವೆಲ್ಲರೂ ಕೂಡ ಭಾರತೀಯರು. ಭಾರತದ ಸುಪುತ್ರರು. ದೇಶ ನಿರ್ಮಾಣ ಮಾಡುವ ಕಾರ್ಯದಲ್ಲಿ ರಾಯಣ್ಣನ ಬದುಕು, ಜೀವನ, ಹೋರಾಟವನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
ನಂದಗಡ ಪ್ರದೇಶದ ರಾಯಣ್ಣ ಅಭಿಮಾನಿಗಳು ಕಳೆದ ನಮ್ಮ ಸರ್ಕಾರದ ಅವಧಿಯಲ್ಲಿ ನಂದಗಡವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಮನವಿ ಮಾಡಿದ್ದರು. ನಾನು ಎಲ್ಲಾ ವರದಿಗಳನ್ನು ಪರಿಶೀಲಿಸಿ ಅಲ್ಲಿ ಸೇತುವೆ ಮಾಡಿಕೊಡಲು ಅರವತ್ತು ಕೋಟಿ ಮಂಜೂರು ಮಾಡಿಕೊಟ್ಟಿದ್ದೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸೋದ್ಯಮಕ್ಕೆ ಉತ್ತೇಜಿಸಲು ಪ್ರಾಧಿಕಾರಕ್ಕೆ ನೂರಾರು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಸಂಸದ ಪ್ರತಾಪ ಸಿಂಹ, ಶಾಸಕ ಶ್ರೀವತ್ಸ, ಉಪಮಹಾಪೌರರಾದ ರೂಪ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರ ಪಾಲಿಕೆ ಸದಸ್ಯರು ಸೇರಿದಂತೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.