ಮೈಸೂರು: ಆತ್ಮಹತ್ಯೆ ಮಾಡಿಕೊಂಡ ಪ್ರತಿ ರೈತರ ಕುಟುಂಬಕ್ಕೂ ಪರಿಹಾರ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರ ಆತ್ಮಹತ್ಯೆಗೆ ಪರಿಹಾರ ಕೊಡುವ ವಿಷಯದಲ್ಲಿ ಉದಾರವಾಗಿರಬೇಕು. ಸರ್ಕಾರ ಹಣ ಕೊಡುತ್ತದೆಯೇ ಹೊರತು ನೀವಲ್ಲ. ತಕ್ಷಣ ನೀಡಬೇಕು. ಅನಗತ್ಯವಾಗಿ ವಿಳಂಬ ಮಾಡಬಾರದು. ? 5 ಲಕ್ಷ ಪರಿಹಾರವನ್ನು ಕೂಡಲೇ ಕೊಡಬೇಕು. ಯಾರಿಗೂ ತಪ್ಲಿಸಬಾರದು. ಎಲ್ಲ ಕುಟುಂಬಕ್ಕೂ ಒದಗಿಸಬೇಕು ಎಂದು ಸೂಚಿಸಿದರು.
ಪರಿಹಾರಕ್ಕಾಗಿ ಯಾವ ರೈತರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕ್ರಮ ವಹಿಸಬೇಕು. ದಸರಾ ಇದೆ ಎಂಬ ಕಾರಣಕ್ಕೆ ಎಲ್ಲರೂ ಅದರಲ್ಲೇ ಮುಳುಗಿ ಹೋಗಬಾರದು. ಇತರ ಕೆಲಸಗಳಿಗೂ ಆದ್ಯತೆ ಕೊಡಬೇಕು ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.
ಅಧಿಕಾರಿಗಳ ನಿರ್ಲಕ್ಷ÷್ಯದಿಂದ ಸತ್ತಿದ್ದರೆ ಸಂಬAಧಿಸಿದವರ ಮೇಲೂ ಕ್ರಮ ಜರುಗಿಸಬೇಕು. ಆತ್ಮಹತ್ಯೆಗೆ ಕಾರಣವೇನು ಎನ್ನುವುದನ್ನೂ ತಿಳಿದುಕೊಳ್ಳಬೇಕು. ಕಾರಣವಾದವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸರ್ಕಾರಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಬೇಕು. ರೈತರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರೈತರು ಸಂಕಷ್ಟದಲ್ಲಿದ್ದಾರೆ. ಅವರ ನೋವಲ್ಲಿ ನೀವೂ ಭಾಗಿಯಾಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಟಿ.ಎಸ್.ಶ್ರೀವತ್ಸ, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ಎ.ಎಚ್. ವಿಶ್ವನಾಥ್, ಜಿ.ಡಿ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಮರಿತಿಬ್ಬೇಗೌಡ, ಸಿ.ಎನ್. ಮಂಜೇಗೌಡ ಇದ್ದರು.