ಮೈಸೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರಲ್ಲಿ ಬುಧವಾರ ಚಾಲನೆ ದೊರೆಯಲಿದ್ದು, ಗೃಹಲಕ್ಷ್ಮಿಯರು ಹಾಗೂ ಗಣ್ಯರ ಸ್ವಾಗತಕ್ಕೆ ನಗರಿ ಸಜ್ಜಾಗಿದೆ.
ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ 1.5 ಲಕ್ಷ ಮಹಿಳೆಯರು ಸಮಾವೇಶಕ್ಕೆ ಸಾಕ್ಷಿ ಆಗಲಿದ್ದಾರೆ.
ಕಾರ್ಯಕ್ರಮಕ್ಕೆಂದು ಅರಮನೆ ಮಾದರಿ ಪ್ರವೇಶ ದ್ವಾರ ನಿರ್ಮಿಸಿದ್ದು, ವೇದಿಕೆಯಲ್ಲಿ 140 ಅಡಿ ಉದ್ದದ ಎಲ್ಇಡಿ ಪರದೆ ಅಳವಡಿಸಲಾಗಿದೆ. ಇಡೀ ನಗರ ಕಾಂಗ್ರೆಸ್ ನಾಯಕರ ಫ್ಲೆಕ್ಸ್, ಬ್ಯಾನರ್ಗಳಿಂದ ತುಂಬಿಹೋಗಿದೆ. ಸಮಾವೇಶಕ್ಕೆ ಜನರನ್ನು ಕರೆತರಲು ಸರ್ಕಾರವೇ ಸುಮಾರು 2 ಸಾವಿರ ಬಸ್ಗಳ ವ್ಯವಸ್ಥೆ ಮಾಡಿದೆ.
ಯೋಜನೆಗೆ ರಾಜ್ಯದ 1.1 ಕೋಟಿ ಮನೆಯೊಡತಿಯರು ನೋಂದಾಯಿಸಿಕೊಂಡಿದ್ದು, ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಲೇ ಅವರೆಲ್ಲರ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ಸಂದಾಯವಾಗಲಿದೆ.
ಈ ಮೊದಲು ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ರಾಹುಲ್ ಗಾಂಧಿ ಪ್ರವಾಸದ ಕಾರಣಕ್ಕೆ ಮೈಸೂರಿಗೆ ಸ್ಥಳಾಂತರಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮೂರ್ನಾಲ್ಕು ದಿನದಿಂದ ಮೈಸೂರಿನಲ್ಲಿ ಬೀಡುಬಿಟ್ಟು, ಸಿದ್ಧತೆ ಪರಿಶೀಲಿಸುತ್ತಿದ್ದಾರೆ.
ರಾಜ್ಯದಾದ್ಯಂತ ಪಂಚಾಯಿತಿ ಮಟ್ಟದಲ್ಲಿ 10 ಸಾವಿರ ಸ್ಥಳಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಸರ್ಕಾರ ವ್ಯವಸ್ಥೆ ಮಾಡಿದೆ.