ಮೈಸೂರು: ಮಳೆಯಿಲ್ಲದೆ ರಾಜ್ಯ ಸಂಕಷ್ಟಕ್ಕೆ ಸಿಲುಕಿದ್ದರೂ, ವಿರೋಧ ನಡುವಲ್ಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕೆ ಮಣಿದ ರಾಜ್ಯ ಸರ್ಕಾರ, ಬುಧವಾರದಿಂದಲೇ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವುದನ್ನು ಆರಂಭಿಸಿದೆ.
ತಮಿಳುನಾಡಿಗೆ ನೀರು ಹರಿಸಲು ಕಾವೇರಿ ನೀರಾವರಿ ಪ್ರಾಧಿಕಾರ ಆದೇಶ ಹಿನ್ನಲೆ ಕೆಆರ್ಎಸ್ ಡ್ಯಾಂನಿಂದ ನದಿಗೆ ನೀರು ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ, ನಿತ್ಯ 5 ಸಾವಿರ ಕ್ಯೂಸೆಕ್ ನೀರಿನಂತೆ, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕಿದೆ.
ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವ ನೀರಾವರಿ ಇಲ್ಲಾಖೆ ಇದಕ್ಕಾಗಿ, ಕೃಷ್ಣರಾಜ ಜಲಾಶಯದಿಂದ 4,398 ಕ್ಯೂಸೆಕ್ಸ್ ನೀರು ಹಾಗೂ ಕಬಿನಿ ಜಲಾಶಯದಿಂದ 2,000 ಕ್ಯೂಸೆಕ್ಸ್ ನೀರನ್ನು ಮಂಗಳವಾರ ರಾತ್ರಿಯಿಂದಲೇ ತಮಿಳುನಾಡಿಗೆ ಬಿಡುಗಡೆ ಮಾಡುತ್ತಿದೆ. ಕೆಆರ್ಎಸ್ನಲ್ಲಿ 24 ಟಿಎಂಸಿ ಅಡಿ ನೀರು ಮತ್ತು ಕಬಿನಿಯಲ್ಲಿ 13 ಟಿಎಂಸಿಯಷ್ಟು ನೀರಿನ ಸಂಗ್ರಹವಿದೆ ಎಂದು ತಿಳಿದುಬಂದಿದೆ.
ಮುಂದಿನ 15 ದಿನಗಳ ವರೆಗೆ ತಮಿಳುನಾಡಿಗೆ ದಿನಕ್ಕೆ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡುತ್ತಿದ್ದಂತೆಯೇ ಸರ್ಕಾರ ರಾಜ್ಯದ ವಾಸ್ತವಿಕ ಸ್ಥಿತಿಯನ್ನು ಪ್ರಾಧಿಕಾರಿಕ್ಕೆ ತಿಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರಾಜ್ಯದ ರೈತರ ಹಿತ ರಕ್ಷಿಸಲು ಹಾಗೂ ಕುಡಿಯುವ ನೀರಿನ ಅಗತ್ಯಗಳ ಪೂರೈಸಲು ಸರ್ಕಾರ ಕಾನೂನು ಹೋರಾಟ ಮುಂದುವರೆಸಲಿದೆ ಎಂದು ತಿಳಿಸಿದ್ದಾರೆ.