ಚಾಮರಾಜನಗರ, ಸೆ.29- ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿ ಇಂದು ಬೆಳಗ್ಗೆ 6 ರಿಂದಲೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಭುವನೇಶ್ವರಿ ವೃತ್ತದಲ್ಲಿ ಕಬ್ಬು ಬೆಳೆಗಾರರ ಸಂಘ, ಕನ್ನಡಪರ ಸಂಘಟನೆಗಳು ರಸ್ತೆ ತಡೆ ನಡೆಸಿ ತಮಿಳುನಾಡು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಟೆ ಬಾರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ನಂತರ, ರಸ್ತೆ ಮಧ್ಯದಲ್ಲಿ ಅರೆಬೆತ್ತಲೆಯಾಗಿ ಉರುಳುಸೇವೆ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಕರ್ನಾಟಕ ಬಂದ್ ಎಂದು ತಮಟೆ ಬಾರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದಾರೆ.