ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ
ಮೈಸೂರು:- ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭವಾಗಿದ್ದು, ಈ ಮೂಲಕ ಅರಮನೆ ಒಳಾಂಗಣ ಪಾರಂಪರಿಕ ದಸರಾ ಕಾರ್ಯಕ್ರಮಗಳ ಆರಂಭಕ್ಕೆ ಚಾಲನೆ ದೊರೆತಿದೆ.
ಅರಮನೆಯಲ್ಲಿ ನವರಾತ್ರಿಯಲ್ಲಿ ನಡೆಯುವ ಸಾಂಪ್ರದಾಯಿಕ ಧಾರ್ಮಿಕ ವಿಧಿ-ವಿಧಾನಗಳು 10 ದಿನಗಳ ಕಾಲ ನಡೆಯಲಿವೆ. ನವರಾತ್ರಿ ಮೊದಲ ದಿನ ಮುಂಜಾನೆ 5.10ರಿಂದ 5.30ರೊಳಗೆ ದರ್ಬಾರ್ ಹಾಲ್ನಲ್ಲಿ ಜೋಡಿಸಲಾಗಿರುವ ಸಿಂಹಾಸನಕ್ಕೆ `ಸಿಂಹ’ ಜೋಡಣಾ ಕಾರ್ಯ ನಡೆಯಿತು. ನಂತರ ಬೆಳಿಗ್ಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಚಾಮುಂಡಿತೊಟ್ಟಿಯಲ್ಲಿ ಕಂಕಣ ಧಾರಣೆ ನೆರವೇರಿತು.
ಬಳಿಕ ಚಾಮುಂಡಿತೊಟ್ಟಿಯಿಂದ ವಾಣಿವಿಲಾಸ ದೇವರ ಮನೆಗೆ ಕಂಕಣವನ್ನು ತಂದು ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಯಿತು.
ಯದುವಂಶದವರು ಅರಮನೆಯಲ್ಲಿ ಶರನ್ನವರಾತ್ರಿಯ ವೇಳೆ ನಡೆಸಿಕೊಂಡು ಬಂದಿರುವ ಖಾಸಗಿ ದರ್ಬಾರ್ಗೆ ಅರಮನೆ ಸಜ್ಜಾಗಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಇದು ಎಂಟನೇ ವರ್ಷದ ದರ್ಬಾರ್ ಆಗಿದೆ.
ದರ್ಬಾರ್ ಮುಗಿದ ಬಳಿಕ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಶ್ರೀರಂಗಪಟ್ಟಣದ ಶ್ರೀರಂಗನಾಥ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿದೇವಿ, ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ, ಕೋಡಿ ಸೋಮೇಶ್ವರ, ಕೋಟೆ ಆಂಜನೇಯಸ್ವಾಮಿ, ಗಣೇಶ ದೇವಾಲಯ, ಕೃಷ್ಣನ ದೇವಾಲಯ ಸೇರಿದಂತೆ 33 ದೇವಾಲಯಗಳಿಂದ ತಂದ ಪ್ರಸಾದ ಸೇವಿಸಿದ ನಂತರ ದರ್ಬಾರ್ ಅಂತಿಮಗೊಳ್ಳಲಿದೆ.
ಪತ್ನಿ ತ್ರಿಷಿಕಾಕುಮಾರಿ, ಪುತ್ರ ಆದ್ಯವೀರ್ ಒಡೆಯರ್ ಜತೆಗೂಡಿ ಸಂಪ್ರದಾಯದಂತೆ ಕಂಕಣ ಕಟ್ಟಲಿದ್ದಾರೆ. ಅದರಂತೆ ಈ ದರ್ಬಾರಿನಲ್ಲಿ ಸಾಂಪ್ರದಾಯಿಕವಾಗಿ ಪಾದಪೂಜೆ ನಡೆಯಿತು. ಸಿಂಹಾಸನದಲ್ಲಿ ವಿರಾಜಮಾನರಾದ ಬಳಿಕ ಪಾದಪೂಜೆ ಮಾಡುವುದು ಆಕರ್ಷಣೆಯಾಗಿದೆ. ಅಲ್ಲದೆ ನವರಾತ್ರಿ ಸಂದರ್ಭದಲ್ಲಿ ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು.ಹಿನ್ನೆಲೆಯಲ್ಲಿ ಸಾರ್ವಜನಿಕರು, ಮಾಧ್ಯಮದವರಿಗೆ ನಿರ್ಬಂಧ ವಿಧಿಸಲಾಗಿದ್ದು, ಕೇವಲ ರಾಜಮನೆತದವರಷ್ಟೇ ಭಾಗವಹಿಸಿದ್ದರು.
ಯದುವೀರ್ ರಿಂದ ದಸರಾ ಹಬ್ಬದ ಶುಭಾಶಯಗಳು
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಲ್ಲರಿಗೂ ಶರನ್ನವರಾತ್ರಿ ಹಾಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಚಾಮುಂಡೇಶ್ವರಿ ತಾಯಿ ನಿಮ್ಮೆಲ್ಲರಿಗೂ ಉತ್ತಮ ಆರೋಗ್ಯ ಮತ್ತು ಅಭಿವೃದ್ಧಿಯನ್ನು ದಯಪಾಲಿಸಲಿ ಹಾಗೂ ಈ ವರ್ಷ ಸಂಕಷ್ಟ ದೂರ ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
ನಾಡಿನ ಜನತೆಗೆ ಶರನ್ನವರಾತ್ರಿ ಹಾಗೂ ದಸರಾ ಹಬ್ಬದ ಶುಭಾಶಯಗಳು ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಾಡಿನ ಜನತೆಗೆ ಶುಭಾಶಯ ತಿಳಿಸಿದ್ದಾರೆ.