ಬೆಂಗಳೂರು:- ಕಾಡುಗಳು ನಾಡಾಗುತ್ತಿವೆ. ಕಾಡಿನತ್ತ ಮನುಷ್ಯ ನುಗ್ಗುತ್ತಿದ್ದಾನೆ. ಕಾಡು ಪ್ರಾಣಿಗಳಿಗೆಂದೇ ಇದ್ದ ವಾಸಸ್ಥಾನವನ್ನು ಕಬಳಿಸುತ್ತಿದ್ದಾನೆ. ಪರಿಣಾಮ ಆಹಾರ ಅರಸಿಕೊಂಡು ಪ್ರಾಣಿಗಳು ನಾಡಿಗಿಳಿಯುತ್ತಿವೆ. ಇದರಿಂದ ಕಾಡು ಪ್ರಾಣಿ ಮತ್ತು ಮನುಷ್ಯ ನಡುವೆ ಸಂಘರ್ಷ ನಡೆಯುತ್ತಿದೆ.
ಇದಲ್ಲದೆ ಕಾಡಿನಲ್ಲಿ ರಸ್ತೆ ನಿರ್ಮಿಸಿ ಕಾಡು ಪ್ರಾಣಿಗಳಿಗೆ ತೊಂದರೆಯುಂಟಾಗುತ್ತಿದೆ. ಅನೇಕ ಕಾಡು ಪ್ರಾಣಿಗಳು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ. ವರ್ಷಕ್ಕೆ ಸಾಕಷ್ಟು ಮೂಕ ಪ್ರಾಣಿಗಳು ರಸ್ತೆಯಲ್ಲೇ ಉಸಿರು ಚೆಲ್ಲುತ್ತವೆ. ಆದರೆ ಈ ಸಮಸ್ಯೆಯನ್ನು ಬಗೆಹರಿಸಲು ಓವರ್ ಪಾಸ್ ಎಂಬ ಹೊಸ ಕಲ್ಪನೆಯನ್ನು ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಅಚ್ಚರಿ ಸಂಗತಿ ಎಂದರೆ ಅರಣ್ಯ ಇಲಾಖೆ ಕರ್ನಾಟಕದ ಬೆಂಗಳೂರಿನ ರೂರಲ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಓವರ್ ಪಾಸ್ ನಿರ್ಮಿಸಿದೆ.
ಕಾಡಾನೆಗಳಿಗೆಂದೇ ಬೆಂಗಳೂರು -ಕನಕಪುರ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ 209) ರೋರಿಚ್ ಮತ್ತು ದೇವಿಕಾರಣಿ ರೋರಿಚ್ ಎಸ್ಟೇಟ್ ಪಕ್ಕದಲ್ಲಿ ಓವರ್ ಪಾಸ್ ನಿರ್ಮಿಸಲಾಗಿದೆ. 40 ಮೀಟರ್ ಅಗಲ ಮತ್ತು 40 ಮೀಟರ್ ಉದ್ದದ ಓವರ್ ಪಾಸ್ ಇದಾಗಿದ್ದು, ಸಾರ್ವಜನಿಕ ರಸ್ತೆಯ ಮೇಲ್ಭಾಗವಾಗಿ ಹಾದು ಹೋಗುತ್ತದೆ. ಇದರ ಮೂಲಕ ಕಾಡಾನೆ ಮಾತ್ರವಲ್ಲ, ಕಾಡು ಪ್ರಾಣಿಗಳು ರಸ್ತೆ ಮೇಲ್ಭಾಗವಾಗಿ ಹಾದು ಹೋಗುವಂತೆ ನಿರ್ಮಿಸಲಾಗಿದೆ. ಇದರಿಂದಾಗಿ ಕಾಡು ಪ್ರಾಣಿಗಳು ವಾಹನ ಅಪಘಾತಕ್ಕೆ ಬಲಿಯಾಗೋದನ್ನು ತಡೆಯಬಹುದಾಗಿದೆ.
ಅಂದಹಾಗೆಯೇ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ನಿಂದ ಸಾವನದುರ್ಗ ಕಾಡಿಗೆ ಪ್ರಾಣಿಗಳು ಹಾದು ಹೋಗಲೆಂದು ಓವರ್ ಪಾಸ್ ನಿರ್ಮಿಸಲಾಗಿದೆ. ಜೊತೆಗೆ ಪ್ರಾಣಿಗಳಿಗೆ ಆಹಾರವಾಗುವ ಸಸ್ಯಗಳನ್ನು ಇಲ್ಲಿ ನೆಡಲಾಗಿದ್ದು, ಬಿದಿರು ಸೇರಿ ಅನೇಕ ರೀತಿಯ ಸಸ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಮಾತ್ರವಲ್ಲದೆ ಪ್ರಾಣಿಗಳು ರಸ್ತೆಗಿಳಿಯದಂತೆ ತಡೆಗೋಡೆ ನಿರ್ಮಿಸಲಾಗಿದೆ.