ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಮುಗಿದಿದ್ದು, ಇದೀಗ ನೂತನ ಕೋಚ್ ಆಗಿ ಟೀಮ್ ಇಂಡಿಯಾದ ಮಾಜಿ ಎಡಗೈ ದಾಂಡಿಗ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.
ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲೂ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೆಕೆಆರ್ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಎಂಬುದು ವಿಶೇಷ. ಅಂದರೆ ಭಾರತ ತಂಡಕ್ಕೆ ಮುಖ್ಯ ಕೋಚ್ ಆಗಿ ಆಯ್ಕೆಯಾದ ಬೆನ್ನಲ್ಲೇ ಗಂಭೀರ್ ಕೆಕೆಆರ್ ತಂಡಕ್ಕೆ ವಿದಾಯ ಹೇಳಲಿರುವ ವಿಡಿಯೋ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ ತಿಳಿದು ಬಂದಿದೆ.
ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಎಂದು ಘೋಷಿಸಿದ ಬಳಿಕ ಕೆಕೆಆರ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಈ ವಿಡಿಯೋ ಬಿಡುಗಡೆಯಾಗಲಿದೆ. ಈ ವಿಡಿಯೋ ಚಿತ್ರೀಕರಣದೊಂದಿಗೆ ಗಂಭೀರ್ ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಆಯ್ಕೆಯಾಗಿರುವುದು ಖಚಿತವಾಗಿದೆ.
ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ನೇರವಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಬಿಸಿಸಿಐ ಸಂದರ್ಶನದಲ್ಲಿ ಗಂಭೀರ್ಗೆ ಪ್ರತಿಸ್ಪರ್ಧಿಯಾಗಿ ಡಬ್ಲ್ಯು.ವಿ ರಾಮನ್ ಕಾಣಿಸಿಕೊಂಡಿದ್ದರು.
ಶೀಘ್ರದಲ್ಲೇ ಘೋಷಣೆ: ಭಾರತ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಅವರ ಹೆಸರನ್ನು ಶೀಘ್ರದಲ್ಲೇ ಘೋಷಿಸಲಿದ್ದಾರೆ. ಏಕೆಂದರೆ ಜುಲೈ ತಿಂಗಳಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕೂ ಮುನ್ನ ಭಾರತ ತಂಡದ ಕೋಚ್ ಯಾರೆಂಬುದನ್ನು ಬಿಸಿಸಿಐ ಬಹಿರಂಗಪಡಿಸಲಿದೆ.