ಮಂಡ್ಯ: ಮಂಡ್ಯದ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆಯಿಂದ ಸಾವಿರಾರು ಕೋಟಿ ನಷ್ಟವಾಗಿರುವುದರ ಜೊತೆಗೆ ಕೆಆರ್ಎಸ್ ಜಲಾಶಯಕ್ಕೆ ಅಪಾಯದ ಭೀತಿ ಇದೆ. ಇದರ ನಡುವೆ ಇದೀಗ ವಿರೋಧದ ನಡುವೆಯೂ ಮತ್ತೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಗೆ ಸರ್ಕಾರ ಮುಂದಾಗಿದೆ. ಸದ್ಯ ಈಗ ಈ ವಿವಾದದಲ್ಲಿ ರಾಜಮಾತೆ ಪ್ರಮೋದಾದೇವಿ ಮಧ್ಯಪ್ರವೇಶ ಮಾಡಿದ್ದು ನಮ್ಮ ಅನುಮತಿ ಪಡೆಯದೆ ಟ್ರಯಲ್ ಬ್ಲಾಸ್ಟ್ ನಡೆಸದಂತೆ ಪತ್ರ ಬರೆದಿದ್ದಾರೆ.
ಬೇಬಿ ಬೆಟ್ಟ ಆಸ್ತಿ ಮೈಸೂರು ಅರಮನೆಗೆ ಸೇರಿದ್ದು. ನಮ್ಮ ಅನುಮತಿ ಪಡೆಯದೆ ಟ್ರಯಲ್ ಬ್ಲಾಸ್ಟ್ ನಡೆಸಬೇಡಿ ಎಂದು ಅಣೆಕಟ್ಟು ಸುರಕ್ಷತಾ ಸಮಿತಿಗೆ ರಾಜಮಾತೆ ಪ್ರಮೋದಾದೇವಿ ಪತ್ರ ಬರೆದಿದ್ದಾರೆ. ಬೇಬಿ ಬೆಟ್ಟದ ಅಮೃತಮಹಲ್ ಕಾವಲ್ನ ಸರ್ವೆ ನಂ.1ರ 1623 ಎಕರೆ ಅರಮನೆಗೆ ಸೇರಿದ ಆಸ್ತಿ. ಈ ಆಸ್ತಿಯನ್ನು ನನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಆಗಿಲ್ಲ. KRS ಡ್ಯಾಂ ಸಮೀಪವಿರುವ ನಮ್ಮ ಖಾಸಗಿ ಜಮೀನಿನಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವ ಹಕ್ಕು ಯಾರಿಗೂ ಇಲ್ಲ ಎಂದು ಅಣೆಕಟ್ಟು ಸುರಕ್ಷತಾ ಸಮಿತಿಗೆ ಪತ್ರ ಬರೆದು ರಾಜಮಾತೆ ಎಚ್ಚರಿಕೆ ನೀಡಿದ್ದಾರೆ
ಕೃಷ್ಣರಾಜಸಾಗರ ಅಣೆಕಟ್ಟು ಬಳಿ ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ಗೆ ಅವಕಾಶ ನೀಡಬಾರದು. ಮೈಸೂರು ಸಂಸ್ಥಾನವಿದ್ದ ಸಮಯದಲ್ಲೇ ಭಾರತ ಸರ್ಕಾರ ಈ ಆಸ್ತಿಯನ್ನು ನನ್ನ ಪತಿ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ತಂದೆಗೆ ನೀಡಿದ್ದು, ನನ್ನ ಪತಿ 2013ರ ಡಿಸೆಂಬರ್ 10ರಂದು ನಿಧನರಾಗಿದ್ದು, ಆನಂತರ ಈ ಆಸ್ತಿಗೆ ನಾನು ವಾರಸುದಾರಳಾಗಿದ್ದೇನೆ. ಈ ಪ್ರದೇಶವನ್ನು ನನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆಯವರಿಗೆ ಅರ್ಜಿ ಸಲ್ಲಿಸಿದ್ದರೂ, ನಾನಾ ಕಾರಣಗಳನ್ನು ಹೇಳುತ್ತಲೇ ಇದುವರೆಗೂ ನನ್ನ ಹೆಸರಿಗೆ ಖಾತೆ ಮಾಡಿಕೊಟ್ಟಿಲ್ಲ. ಅದಕ್ಕಾಗಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿ ಬೇಬಿಬೆಟ್ಟ ಕಾವಲ್ನ ಸರ್ವೇ ನಂ.1ರ ಪ್ರದೇಶವನ್ನು ನನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಕೋರಿದ್ದೇನೆ ಎಂದು ತಿಳಿಸಿದ್ದಾರೆ.