ಬಳ್ಳಾರಿ: ಮಲೆನಾಡಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರ ಜಲಾಶಯಕ್ಕೆ ಇಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ 63320 ಕ್ಯೂಸೆಕ್ ನೀರು ಹರಿದು ಬರುತ್ತಿರುವುದು. ಕಳೆದ ವರ್ಷ ಮಳೆ ಅಭಾವದಿಂದ ಜಲಾಶಯ ಭರ್ತಿಯಾಗದೇ ಒಂದೇ ಬೆಳೆ ಪಡೆದಿದ್ದ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ.
ಸಧ್ಯ ತುಂಗಾ ಜಲಾಶಯದಿಂದ 70497 ಕ್ಯೂಸೆಕ್ ನೀರು ಹರಿಬಿಟ್ಟಿರುವುದರಿಂದ ತುಂಗಭದ್ರ ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರುವುದು ಖಚಿತವಾಗಿದೆ.
ಜಲಾಶಯದ ಗರಿಷ್ಟ ಮಟ್ಟ 1633 ಅಡಿ ಇದ್ದು. ಇಂದು 1611 ಕ್ಕೆ ತಲುಪಿದೆ. ಜಲಾಶಯದಲ್ಲಿ ಈಗಾಗಲೇ 40 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಒಟ್ಟು ಸಾಮರ್ಥ 105.78 ಟಿಎಂಸಿಯಾಗಿದೆ.
ಜಲಾಶಯದಿಂದ 212 ಕ್ಯೂಸೆಕ್ ಮಾತ್ರ ಹೊರ ಬಿಡುತ್ತಿದೆ. ಮುಖ್ಯ ಕಾಲುವೆಗಳಿಗೆ ಇನ್ನು ನೀರು ಹರಿಸಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಮೀನುಗಳನ್ನು ಹದ ಮಾಡಿಕೊಂಡು, ಭತ್ತದ ನಾಟಿ, ಮೆಣಸಿನಕಾಯಿ, ಮುಸುಕಿನಜೋಳ, ಹತ್ತಿ ಮದಲಾದ ಬೆಳೆ ಬಿತ್ತನೆಗೆ ಸಜ್ಜಾಗಿದ್ದಾರೆ.