ವೈದ್ಯಲೋಕದ ಅನೇಕ ಅಧ್ಯಯನಗಳು, ಪರಿಣಿತರು ಯುವಕರಲ್ಲಿ ಬಹುಬೇಗ ಬರುವ ಕ್ಯಾನ್ಸರ್ ಬಗ್ಗೆ ಒಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಜೀವನ ಶೈಲಿ, ನಿಮ್ಮ ಊಟದ ಪದ್ಧತಿ ಹಾಗೂ ನಿದ್ರಿಸುವ ಸಮಯ ಬಹಳ ಮುಖ್ಯ ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದ್ರೂ ಕ್ಯಾನ್ಸರ್ ಎಂಬ ಮಹಾಮಾರಿ ನಿಮಗೆ ವಕ್ಕರಿಸಿಬಿಡುತ್ತೆ ಎಂದು ಹೇಳಿದ್ದಾರೆ. ಒಂದು ಪೂರ್ವಬಾರಿ ಸಂಶೋಧನೆಯಲ್ಲಿ ನಿಮ್ಮ ನಿದ್ದೆಯ ಗುಣಮಟ್ಟ ಹಾಗೂ ಸಮಯ ಮೊಟಕುಗೊಂಡರೆ ಅದು ನಿಮ್ಮ ದೇಹದಲ್ಲಿ ವಿನಾಶಕ ಕ್ಯಾನ್ಸರ್ನ್ನು ಸೃಷ್ಟಿಸಬಹುದು ಎಂದು ಹೇಳಲಾಗಿದೆ. ಅತ್ಯಂತ ಕಡಿಮೆ ನಿದ್ದೆ ಮಾಡುವುದು ದೇಹಕ್ಕೆ ಅತ್ಯಂತ ಹಾನಿಕಾರಕ ಹಾಗೂ ಅಪಾಯವನ್ನು ತಂದೊಡ್ಡಬಹುದು. ಸರಿಯಾದ ನಿದ್ದೆ ಹಲವು ಸೋಂಕುಗಳನ್ನು ನಿಯಂತ್ರಿಸುವಲ್ಲಿ ಸಹಾಯಕಾರಿ ಹೀಗಾಗಿ ಸರಿಯಾಗಿ ನಿದ್ದೆ ಮಾಡದಿದ್ದ ಪಕ್ಷದಲ್ಲಿ ಕ್ಯಾನ್ಸರ್ ನಿಮ್ಮ ದೇಹದಲ್ಲಿ ಸರಾಗವಾಗಿ ಬಂದು ಸೇರಬಹುದು ಎಂದು ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ.
ಸ್ಪರ್ಧಾತ್ಮಕ ಜಗತ್ತು, ಓದಿ ಏನನ್ನಾದರು ಸಾಧಿಸಬೇಕು ಅನ್ನೋ ಹುಮ್ಮಸ್ಸು, ಮಾಡುವ ಉದ್ಯೋಗದಲ್ಲಿ ದೊಡ್ಡ ಗೆಲುವು ಕಾಣಬೇಕು ಅನ್ನೋ ಛಲ, ದುಡಿಯುವ ಜಾಗದಲ್ಲಿ ದೊಡ್ಡ ಹುದ್ದೆಗೆ ಹೋಗಬೇಕು ಅನ್ನೋ ಹಠ. ಇವೆಲ್ಲವೂ ಸಾಧನೆ ಪಥಗಳೇ. ಈ ಸಾಧನೆಯ ಹಾದಿಯಲ್ಲಿ ಮುನ್ನುಗ್ಗಿ ಹೋಗುವ ಭರದಲ್ಲಿ ಜನರು ನಿದ್ರೆಯನ್ನು ಮರೆತು ಬಿಡುತ್ತಾರೆ. ದಿನಕ್ಕೆ 16-17 ಗಂಟೆ ನಿರಂತರವಾಗಿ ಕೆಲಸದಲ್ಲಿ, ಓದಿನಲ್ಲಿ ದುಡಿತದಲ್ಲಿ ತೊಡಗಿ ಬಿಡುತ್ತಾರೆ. ಹಗಲಿರುಳನ್ನು ಒಂದು ಮಾಡಿ ಇಟ್ಟುಕೊಂಡಿರುವ ಗುರಿಯತ್ತ ಮುನ್ನುಗ್ಗಲು ನಿದ್ರೆಗೆ ಬೈ ಬೈ ಹೇಳುತ್ತಾರೆ. ದಿನಕ್ಕೆ ಮೂರೋ ಐದೋ ಗಂಟೆ ಮಲಗಿ ಎದ್ದು ಮತ್ತೆ ತಮ್ಮ ಗುರಿಯತ್ತ ಹೆಜ್ಜೆ ಹಾಕುತ್ತಾರೆ.
ಸದ್ಯ ಪ್ರಪಂಚವೇ ಹಾಗಿದೆ. ಎಲ್ಲಿ ನೋಡಿದರು ಸ್ಪರ್ಧೆ. ಕೊಂಚ ಮೈ ಮರೆತರು ಸಾಕು ಇನ್ಯಾರೋ ನಮ್ಮ ಹಿಂದಿಕ್ಕಿ ಮುನ್ನುಗ್ಗುತ್ತಾರೆ ಅನ್ನೋ ಆತಂಕದಲ್ಲಿ ಊಟ, ನಿದ್ರೆ ಎಲ್ಲವನ್ನೂ ಬಿಟ್ಟು ಸಾಧನೆಯ ಪಥದಲ್ಲಿ ಸಾಗುವ ಗುಂಪು ಒಂದು ಕಡೆ. ಮತ್ತೊಂದು ಕಡೆ ಮೊಬೈಲ್, ಚಾಟಿಂಗ್, ರೀಲ್ಸ್ ವೀಕ್ಷಣೆ, ವಿಡಿಯೋ ಗೇಮ್ ವೆಬ್ ಸಿರೀಸ್, ಸಿನಿಮಾಗಳು ಅಂತ ಟೈಮ್ ಪಾಸ್ ಮಾಡುತ್ತಾ ನಿದ್ದೆಯನ್ನೇ ಮಾಡದೇ ಇರುವ ಯುವಕ ಯುವತಿಯರ ಗುಂಪು ಮತ್ತೊಂದು ಕಡೆ. ಒಟ್ಟಾರೆ ನಿದ್ದೆಯನ್ನೇ ಬದಿಗೆ ಸರಿಸಿ ಮತ್ತೊಂದರಲ್ಲಿ ತೊಡಗುತ್ತಿರುವವರು ಯಾರೇ ಇರಲಿ, ಕೊಂಚ ಜಾಗರೂಕರಾಗಿರಿ. ಯಾಕಂದ್ರೆ ಇತ್ತೀಚೆಗೆ ವೈದ್ಯಲೋಕದಲ್ಲಿ ನಡೆದ ಒಂದು ಅಧ್ಯಯನ ಬೆಚ್ಚಿ ಬೀಳಿಸುವ ವರದಿಯನ್ನು ನೀಡಿದೆ.
ಒಂದು ಅಧ್ಯಯನದ ಪ್ರಕಾರ, ಕಡಿಮೆ ನಿದ್ದೆ ಅಂದ್ರೆ ನಿತ್ಯ ರಾತ್ರಿ 6 ರಿಂದ 7 ತಾಸುಗಳಿಗಿಂತಲೂ ಕಡಿಮೆ ನಿದ್ದೆ ಮಾಡುವವರ ದೇಹದಲ್ಲಿ ಕ್ಯಾನ್ಸರ್ಗೆ ಕಾರಣವಾಗಬಲ್ಲ ಕೋಲನ್ ಪಾಲಪ್ಸ್ನ್ನು ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಇದು ಕೋಲನ್ ಕ್ಯಾನ್ಸರ್ಗೆ ಕಾರಣವಾಗಬಲ್ಲದು. ನಿದ್ರಾಹೀನತೆಯಿಂದ ಬಳಲುತ್ತಿದ್ದವರಲ್ಲಿ ಅತಿ ಹೆಚ್ಚು ಕೊಲಾರೆಕ್ಟಲ್ ಕ್ಯಾನ್ಸರ್ ಕಂಡು ಬಂದಿದೆ ಎಂದು ವರದಿಯೊಂದು ಹೇಳಿದೆ. ಅದು ಮಾತ್ರವಲ್ಲ ಖಿನ್ನತೆ ಹಾಗೂ ನಿದ್ರಾಹೀನತೆ ಕೊಲಾರೆಕ್ಟಲ್ ಕ್ಯಾನ್ಸರ್ಗೆ ಕಾರಣವಾದ ಬಗ್ಗೆ ಅನೇಕ ಅಧ್ಯಯನಗಳು ಸ್ಪಷ್ಟನೆ ನೀಡಿವೆ. ಇದು ಮಾತ್ರವಲ್ಲ ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಬ್ರೀಸ್ಟ್ ಕ್ಯಾನ್ಸರ್ (ಸ್ತನ ಕ್ಯಾನ್ಸರ್), ಪ್ರೋಸ್ಟೇಟ್ ಕ್ಯಾನ್ಸರ್, ಲಿಂಪೋಮಾ ಹಾಗೂ ಲೀವರ್ ಕ್ಯಾನ್ಸರ್ನಂತಹ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಇದೆ ಇಷ್ಟು ಮಾತ್ರವಲ್ಲ ರೋಗಗಳ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆಯ ಕೇಂದ್ರಗಳು ಇನ್ನೂ ಬೆಚ್ಚಿ ಬೀಳಿಸುವ ಮಾಹಿತಿಯೊಂದನ್ನು ನೀಡಿದೆ. ನಿದ್ರಾಹೀನತೆ ಕೆಲವು ಕ್ಯಾನ್ಸರ್ ಮಾತ್ರವಲ್ಲ ಹೃದಯ ಸಂಬಂಧಿ ಕಾಯಿಲೆಗಳು, ಬೊಜ್ಜು, ಸಕ್ಕರೆ ಕಾಯಿಲೆ ಹಾಗೂ ಖಿನ್ನತೆಯಂತ ಸಮಸ್ಯೆಗಳನ್ನು ಕೂಡ ಸೃಷ್ಟಿಸುತ್ತದೆ ಎಂದು ಹೇಳಲಾಗಿದೆ.
Centers for Disease Control and Prevention ಹೇಳುವ ಪ್ರಕಾರ, ನಿರಾತಂಕವಾಗಿ ಪ್ರತಿದಿನ ರಾತ್ರಿ 8-9 ಗಂಟೆಗಳ ಸುಖನಿದ್ರೆಯನ್ನು ಮಾಡುವುದರಿಂದ ಅನೇಕ ಸಮಸ್ಯೆಗಳಿಂದ ದೂರ ಇರಬಹುದು. ಒಂದೊಳ್ಳೆ ಗುಣಮಟ್ಟದ ನಿದ್ರೆಯನ್ನು ಮಾಡಲು ನೀವು ಕೆಲವು ನಿಯಮಗಳನ್ನು ಪಾಲನೆ ಮಾಡಲೇಬೇಕಾಗುತ್ತದೆ. ದಿನನಿತ್ಯವು ಕನಿಷ್ಠ ಒಂದು ಗಂಟೆಯಾದ್ರೂ ವ್ಯಾಯಾಮ ಮಾಡಬೇಕು. ಕೊನೆ ಪಕ್ಷ ನೀವು ಹಾಸಿಗೆ ತೆರಳುವ 3 ಗಂಟೆ ಮುಂಚೆ ಯಾವುದೇ ಮದ್ಯಪಾನ, ಧೂಮಪಾನದಂತ ಚಟುವಟಿಕೆಗಳಲ್ಲಿ ತೊಡಗಬಾರದು. ಮೊಬೈಲ್ ಹಾಗೂ ಟಿವಿಯ ಗೀಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. ಮಲಗುವ ಮುನ್ನ ಒಂದು ಅರ್ಧ ಗಂಟೆಯಾದ್ರು ಓದುವ ಹವ್ಯಾಸ ಇಟ್ಟುಕೊಂಡಿರಬೇಕು. ಈ ರೀತಿಯ ಅಭ್ಯಾಸಗಳನ್ನು ಬೆಳೆಸಿಕೊಂಡ್ರೆ ನೀವು ಸುಖನಿದ್ರೆಯನ್ನು ಅನುಭವಿಸುವುದರೊಂದಿಗೆ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು.