ಮೈಸೂರು: ಭಾನುವಾರ ಗೋಧೂಳಿ ಸಮಯ. ನಗರದ ಆಗಸದಿಂದ ಇನ್ನೇನು ಸೂರ್ಯ ಮುಳುಗುತ್ತಿದ್ದಾನೆ… ಅಮಾವಾಸ್ಯೆಯ ಕತ್ತಲು ಆವರಿಸುತ್ತಿದೆ ಅನ್ನುವ ಕ್ಷಣದಲ್ಲಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹೊಸದೊಂದು ಗಾಂಧರ್ವ ಲೋಕ ಸೃಷ್ಟಿಯಾಗುತ್ತಿತ್ತು. ಮುಂದಿನ ಎರಡು ಗಂಟೆಗಳ ಕಾಲ ಅಲ್ಲಿ ಮಿನಿ ಭಾರತೀಯ ಸಾಂಸ್ಕೃತಿಕ ಮಾಯಾಲೋಕವೊಂದು ಸೃಷ್ಟಿಯಾಗಿತ್ತು. ನಗರದ ಪೂರ್ಣ ಚೇತನ ಶಾಲೆಯ ಪೂರ್ವ ಪ್ರಾಥಮಿಕದಿಂದಿಡಿದು, ಹತ್ತನೇ ತರಗತಿಯವರೆಗಿನ ಸುಮಾರು 550 ವಿದ್ಯಾರ್ಥಿಗಳು ಅಲ್ಲಿ ನೃತ್ಯಗಳ ಮೂಲಕವೇ ಮಾಯಾ ಲೋಕವೊಂದನ್ನು ಸೃಷ್ಟಿಸಿದ್ದರು. ಯಾವುದೇ ವಿರಾಮವಿಲ್ಲದೆ, ಎರಡು ಗಂಟೆಗಳ ಕಾಲ ಸತತವಾಗಿ, ಹಿಮಾಲಯದಲ್ಲಿ ಹುಟ್ಟಿ, ಈ ನೆಲವನ್ನು ಪಾವನಗೊಳಿಸುವ ಗಂಗೆಯ ಪ್ರವಾಹದಂತೆ, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಝರಿಗಳಲ್ಲಿ ಹರಿಯುತ್ತಾ ಬಯಲು ಪ್ರದೇಶದಲ್ಲಿ ಗಂಭೀರವದನೆಯಾಗಿ ಸಾಗುವ ತುಂಗೆಯಂತೆ, ವಿದ್ಯಾರ್ಥಿಗಳು ಈ ನೆಲದ ಹೆಮ್ಮೆಯ ನೃತ್ಯಗಳನ್ನು, ಪ್ರತಿ ಭಾರತೀಯರು ಎದೆ ಉಬ್ಬಿಸಿ ಹೆಮ್ಮೆ ಪಡುವಂತೆ ಪ್ರದರ್ಶಿಸಿದರು. ಮಕ್ಕಳ ನೃತ್ಯ ಪ್ರದರ್ಶನ ಕೊನೆಗೊಳ್ಳುತ್ತಿದ್ದಂತೆ, ಮಾರ್ಧನಿಸಿದ ಪ್ರೇಕ್ಷಕರ ಚಪ್ಪಾಳೆ, ಭಾರತ್ ಮಾತಾಕಿ ಜೈ ಅನ್ನುವ ಘೋಷಣೆಗಳು ಪ್ರತಿಯೊಬ್ಬರಲ್ಲೂ ವಿದ್ಯುತ್ ಸಂಚಾರವಾದಂತಹ ಅನುಭವ ನೀಡಿತು.
ಈ ಎಲ್ಲಾ ಪ್ರದರ್ಶನಗಳಿಗೂ ಕಿರೀಟ ಸದೃಶದಂತೆ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಕಾಶ್ಮೀರದಲ್ಲಿ ಈ ನಾಡಿನ ಮಣ್ಣಿನ ರಕ್ಷಣೆಗೆ ಜೀವ ತ್ಯಾಗಗೈಯುವ ವೀರ ಯೋಧರ ಬಲಿದಾನದ ಸಾಹಸ ಗಾಥೆ ಎಲ್ಲೆಡೆ ವಂದೇ ಮಾತರಂ ಘೋಷಣೆ ಪ್ರತಿಧ್ವನಿಸುವಂತೆ ಮಾಡಿತು. ಅಮರನಾಥಯಾತ್ರೆಯ ಸಂದರ್ಭದಲ್ಲಿ ಭಯೋತ್ಪಾದಕರ ದಾಳಿಯ ಕತೆಯ ಎಳೆಯ ಈ ನೃತ್ಯ ರೂಪಕ ನಮ್ಮ ವೀರ ಸೈನಿಕರ ಸಾಹಸ, ತ್ಯಾಗ, ಅಪ್ರತಿಮ ವೀರ ಸಂಕಲ್ಪಕ್ಕೆ ನಮ್ಮೆಲ್ಲರ ಕೃತಜ್ಞತೆಯಾಗಿತ್ತು. ಪಾಕ್ ಪ್ರೇರಿತ ಭಯೋತ್ಪಾದಕರ ಹುಟ್ಟಡಗಿಸುತ್ತಾ, ಅಪ್ರತಿಮ ಸಾಹಸ ತೋರುವ ಸೈನಿಕರಿಗೆ ಮಕ್ಕಳೆಲ್ಲಾ ವೀರ ವಂದನೆ ಸಲ್ಲಿಸಿದ ಕ್ಷಣ ಅಲ್ಲೊಂದು ದೇಶಾಭಿಮಾನದ ವಾತಾವರಣ ಸೃಷ್ಟಿಸಿತು. ಈ ನೃತ್ಯ ರೂಪಕ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರಲ್ಲಿಯೂ ಕಣ್ಣೀರು ಜಿನುಗುವಂತೆ ಮಾಡಿತ್ತು.
ಈಶಾನ್ಯ ಭಾರತದ ಪ್ರಸಿದ್ಧ ಬಿದಿರು ನೃತ್ಯ, ಕರ್ನಾಟಕದ ಪಿಳಿ ನಲಿಕೆ, ವೀರಗಾಸೆ, ಕೋಲಾಟ, ಡೊಳ್ಳು ಕುಣಿತ,
ಜಾರ್ಖಂಡ್ನ ಪೈಕಾ, ಲಡಾಕ್ನ ಕಥೋಕ್ ಚೆನ್ಮೋ , ಮಧ್ಯಪ್ರದೇಶದ ಮಟ್ಕಿ, ನಾಗಾಲ್ಯಾಂಡ್ ರಾಜ್ಯದ ಚಾಂಗ್ ಲೂ, ಹಿಮಾಚಲ ಪ್ರದೇಶದ ನಾತಿ, ತ್ರಿಪುರಾದ ಹೊಜಗಿರಿ ಹೀಗೆ ಮೈಸೂರಿನ ನೃತ್ಯಪ್ರಿಯರಿಗೆ ಅಪರಿಚಿತವಾದ ಸುಮಾರು 36 ಬಗೆಯ ನೃತ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಎಳೆಯ ಮಕ್ಕಳು ತಮ್ಮ ಮುಖ ಭಾವ, ವಾದ್ಯ -ತಾಳಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುತ್ತಾ, ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರಿದರು. ಪೂರ್ಣ ಚೇತನ ಶಾಲೆಯ ಅಧ್ಯಕ್ಷ ಡಾ. ವಿದ್ಯಾಸಾಗರ್ ಪ್ರಕಾರ, ಈ ನೃತ್ಯಗಳು ಹಾಗು ನೃತ್ಯ ರೂಪಕದ ಮೂಲಕ ವಿಶ್ವದಾಖಲೆ ಸೃಷ್ಟಿಸಿದ ಪ್ರಯತ್ನದ ಹಿಂದಿನ ಮೂಲ ಉದ್ದೇಶ ನಮ್ಮ ಮುಂದಿನ ಪೀಳಿಗೆಗೆ ಈ ದೇಶದ ಶ್ರೇಷ್ಠತೆ, ಪರಂಪರೆ, ಹಾಗು ತಾಯ್ನಾಡಿಗಾಗಿ ತ್ಯಾಗದ ಸಂದೇಶ ರವಾನೆ.
“ಈಶಾನ್ಯ ಭಾರತದ ನೃತ್ಯ ಪ್ರಕಾರಗಳು ದಕ್ಷಿಣ ಭಾರತೀಯರಿಗೆ ಇನ್ನು ಪೂರ್ಣವಾಗಿ ಪರಿಚಯವಾಗಿಲ್ಲ. ಅದಕ್ಕೆ ಬೇಕಾದ ಉಡುಗೆ-ತೊಡುಗೆಗಳು ಇಲ್ಲಿ ದೊರಕುವುದಿಲ್ಲ. ನೃತ್ಯ ಸಂಯೋಜನೆ ಕೂಡಾ ತೀರಾ ಹೊಸತು. ಇದರ ಎಲ್ಲಾ ಜವಾಬ್ದಾರಿಗಳನ್ನು ನಾವೇ ವಹಿಸಿಕೊಂಡು ಈ ಹೊಸ ಪ್ರಯತ್ನ ಮಾಡಿದೆವು,” ಎಂದು ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ದರ್ಶನ್ ರಾಜ್ ತಿಳಿಸಿದರು.
ಖ್ಯಾತ ಕಲಾವಿದೆಯೂ ಆಗಿರುವ ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ ಎಳವೆಯಲ್ಲೇ ದೇಶ ಸೇವೆಯ ಪ್ರೇರೇಪಣೆಯನ್ನು ನಮ್ಮ ಮಕ್ಕಳಿಗೆ ನೀಡುವುದು ನಮ್ಮ ಪ್ರಮುಖ ಗುರಿ ಎಂದು ತಿಳಿಸಿದರು.
ಎಲೈಟ್ ವರ್ಲ್ಡ್ ರೆಕಾರ್ಡ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲು ಥಿನ್ ಪೋಹ್ ಟಾಯ್ ವನ್ ಚಿಂಗ್ ಮಾತನಾಡಿ ಇಂತಹ ಒಂದು ಪ್ರಯತ್ನವನ್ನು ತಾವು ಎಲ್ಲಿಯೂ ಇಂದಿನವರೆಗೆ ನೋಡಿಲ್ಲ. ವಿದ್ಯಾರ್ಥಿಗಳ ಪ್ರದರ್ಶನ ಒಂದು ಅನನ್ಯ ಸಾಧನೆ ಎಂದು ಬಣ್ಣಿಸಿದರು.
ಎಲೈಟ್ ವರ್ಲ್ಡ್ ರೆಕಾರ್ಡ್ಸ್, ಸಿಂಗಾಪುರದ ತೀರ್ಪುಗಾರ್ತಿ ಶ್ರೀಮತಿ ಟಾಯ್ ವಾನ್ ಚಿಂಗ್, ಎಲೈಟ್ ವರ್ಲ್ಡ್ ರೆಕಾರ್ಡ್ಸ್
ರಾಯಭಾರಿ ಮತ್ತು ಹಿರಿಯ ತೀರ್ಪುಗಾರ್ತಿ ಅಮೀತ್ ಕೆ ಹಿಂಗೋರಾಣಿ, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿಯ ರಾಯಭಾರಿ ಮತ್ತು ಹಿರಿಯ ತೀರ್ಪುಗಾರ ಡಾ.ಎ.ಕೆ.ಸೆಂಥಿಲ್ ಕುಮಾರ್, ಇಂಡಿಯಾ ರೆಕಾರ್ಡ್ಸ್ ಅಕಾಡೆಮಿ ರೆಕಾರ್ಡ್ಸ್ ಮ್ಯಾನೇಜರ್
ಕೆ.ಆರ್.ವೆಂಕಟೇಶ್ವರನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶಾಲೆಗೆ ವಿಶ್ವದಾಖಲೆಯ ಪ್ರಮಾಣ ಪತ್ರ ವಿತರಿಸಿ, ಅಭಿನಂದಿಸಿದರು.