ಬೆಂಗಳೂರು: ಮುಡಾ ಹಗರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡೆ ಸಂವಿಧಾನಬಾಹಿರ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು. ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇದನ್ನು ನಾವು ನಿರೀಕ್ಷೆ ಮಾಡಿದ್ದೆವು. ದೂರು ಕೊಟ್ಟ ದಿನವೇ ಶೋಕಾಸ್ ನೋಟಿಸ್ ನೀಡುತ್ತಾರೆ ಎಂದರು.
ನಾನು ನಿರೀಕ್ಷೆ ಮಾಡಿದ್ದೆ. ಯಾವಾಗ ರಾಜ್ಯಪಾಲರು 26 ರಂದು ಶೋಕಾಸ್ ನೋಟಿಸ್ ಕೊಟ್ಟಿದ್ದರೋ ಆವಾಗಲೇ ನಿರೀಕ್ಷೆ ಇತ್ತು. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮೇಲೆ ನವೆಂಬರ್ ತಿಂಗಳಲ್ಲೇ ಪಿಟಿಷನ್ ಸಲ್ಲಿಕೆಯಾಗಿದೆ. ಶಿಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಮೇಲೆಯೂ ಇದೆ. ನನಗೆ ಮಾತ್ರ ಶೋಕಾಸ್ ನೋಟಿಸ್ ಕಳುಹಿಸಿದ್ದಾರೆ. ನನಗೆ ಮಾತ್ರ ನೋಟಿಸ್ ಕೊಟ್ಟಿದ್ದಾರೆ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.ಅನೇಕ ರಾಜ್ಯಗಳಲ್ಲಿ ಇದೇ ತರಹ ಮಾಡಿದ್ದಾರೆ. ದೆಹಲಿ, ಜಾರ್ಖಾಂಡ್ನಲ್ಲಿ ಕೂಡ ಇದೆ ರೀತಿ ಆಗಿದೆ. ಬಿಜೆಪಿ, ಜೆಡಿಎಸ್ ಎಲ್ಲ ಸೇರಿಕೊಂಡಿದ್ದಾರೆ. ರಾಜ್ಯಪಾಲರ ನಿರ್ಧಾರ ಸಂವಿಧಾನ ಬಾಹಿರ. ನಾನು ಕಾನೂನು ಹೋರಾಟ ಮಾಡುತ್ತೇವೆ. ಹೈಕಮಾಂಡ್, ಪಕ್ಷ, ಶಾಸಕರು ಎಲ್ಲರೂ ನನ್ನ ಜೊತೆ ಇದ್ದಾರೆ. ನಾನು ರಾಜೀನಾಮೆ ಕೊಡುವ ತಪ್ಪು ಮಾಡಿಲ್ಲ. ಅವರು ಕಾನೂನುಬಾಹಿರ ಅಂದಿದ್ದಾರೆ. ರಾಜ್ಯಪಾಲರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ರಾಜ್ಯಪಾಲರ ನಡೆಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡುತ್ತಿದ್ದಂತೆಯೇ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಕಾನೂನು ತಜ್ಞರು, ಸಚಿವರು ಹಾಗೂ ಆಪ್ತರ ಜತೆ ಸಮಾಲೋಚನೆ ನಡೆಸಿದ ಸಿದ್ದರಾಮಯ್ಯ ನಂತರ ಈ ಹಿಂದಿನ ವೇಳಾಪಟ್ಟಿ ಪ್ರಕಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.