ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ಲಾಲ್ ಅವರಿಗೆ ಹಠಾತ್ ಅನಾರೋಗ್ಯ ಉಂಟಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋಹನ್ಲಾಲ್ ಅವರಿಗೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ಕೊಚ್ಚಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೋಹನ್ಲಾಲ್ಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಅಧಿಕೃತ ಹೇಳಿಕೆಯನ್ನು ಆಸ್ಪತ್ರೆಯು ಬಿಡುಗಡೆ ಮಾಡಿದೆ.
64 ವರ್ಷದ ಮೋಹನ್ಲಾಲ್ ಅವರಿಗೆ ತೀವ್ರ ಜ್ವರ, ಮೈ-ಕೈ ನೋವು ಜೊತೆಗೆ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇತ್ತೀಚೆಗಷ್ಟೆ ಗುಜರಾತ್ಗೆ ತೆರಳಿದ್ದ ಮೋಹನ್ಲಾಲ್ ಚಿತ್ರೀಕರಣ ಮುಗಿಸಿಕೊಂಡು ಇತ್ತೀಚೆಗಷ್ಟೆ ಕೊಚ್ಚಿಗೆ ವಾಪಸ್ಸಾಗಿದ್ದರು. ವಾಪಸ್ಸಾದ ಕೂಡಲೇ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಆದರೆ ಜ್ವರ ಏರುತ್ತಾ ಸಾಗಿದ್ದು, ಇಂದು ಬೆಳಿಗ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ಕೊಚ್ಚಿಯ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೋಹನ್ಲಾಲ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆ ಆಡಳಿತ ಮಂಡಳಿ, ‘65 ವರ್ಷ ವಯಸ್ಸಿನ ಮೋಹನ್ಲಾಲ್ ಅವರಿಗೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮೋಹನ್ಲಾಲ್ ಅವರಿಗೆ ತೀವ್ರ ಜ್ವರ, ಉಸಿರಾಟದಲ್ಲಿ ಸಮಸ್ಯೆ ಮತ್ತು ಮಾಂಸಖಂಡಗಳಲ್ಲಿ ನೋವು ಇರುವುದಾಗಿ ತಿಳಿದು ಬಂದಿದೆ. ಮೋಹನ್ಲಾಲ್ ಅವರಿಗೆ ಶ್ವಾಸಕೋಶದ ಸೋಂಕು ಆಗಿರುವ ಅನುಮಾನ ಇದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಐದು ದಿನಗಳ ಕಾಲ ಔಷಧಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಜೊತೆಗೆ ಐದು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ’ ಎಂದಿದ್ದಾರೆ.