ಬೆಂಗಳೂರು: ಭೀಮ ನಟ ದುನಿಯಾ ವಿಜಯ್ಗೆ ಸಿಸಿಬಿ ಪೊಲೀಸರು ನೋಟಿಸ್ ಕೊಡಲಿಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಚಾಮರಾಜ ಪೇಟೆ ಸಿಸಿಬಿ ಕಚೇರಿಯ ಕೂಗಳತೆ ದೂರದಲ್ಲಿಯೇ ಮಾದಕವಸ್ತು ಸೇವನೆ ಮಾಡುತ್ತಿದ್ದಾರೆ ಎಂದು ದುನಿಯಾ ವಿಜಯ್ ಹೇಳಿದ್ದರು.
ಇದೀಗ ನಟನ ಹೇಳಿಕೆಯ ವಿಚಾರವಾಗಿ ಸಿಸಿಬಿ ನೋಟಿಸ್ ಕೊಡಲು ಮುಂದಾಗಿದ್ದಾರೆ. ಭೀಮ ಸಿನಿಮಾದ ರಿಲೀಸ್ ಬಳಿಕ ನಟ ದುನಿಯಾ ವಿಜಯ್ ಚಾಮರಾಜಪೇಟೆ ಬಳಿ ಸ್ಥಳವೊಂದರ ಮೇಲೆ ದಾಳಿ ಮಾಡಿದ್ದರು. ಮಾದಕವಸ್ತು ಸೇವನೆಗೆ ಬಳಸುವ ಸಿರೀಂಜ್ ಸೇರಿ ಕೆಲ ವಸ್ತುಗಳನ್ನ ನಟ ಪತ್ತೆ ಮಾಡಿದ್ದರು.
ಇವಿಷ್ಟು ಅಲ್ಲದೆ, ನಗರದ ಕೆಲ ಮೆಡಿಕಲ್ ಶಾಪ್ಗಳಲ್ಲಿ ಟೈಡಾಲ್ ಮಾತ್ರೆಯನ್ನ ಮಾದಕ ವ್ಯಸನಿಗಳಿಗೆ ಮಾರಾಟ ಮಾಡ್ತಿದ್ದಾರೆಂದು ಫೇಸ್ಬುಕ್ ಲೈವ್ನಲ್ಲಿ ದುನಿಯಾ ವಿಜಯ್ ತಿಳಿಸಿದ್ದರು. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಸುಮೋಟೋ ಕೇಸ್ ದಾಖಲಿಸಿಕೊಳ್ಳಬೇಕು ಎಂದಿದ್ದರು.
ಸಿಸಿಬಿ ಜಂಟಿ ಆಯುಕ್ತ ಚಂದ್ರಗುಪ್ತರವರು, ನಟ ದುನಿಯಾ ವಿಜಯ್ ಅವರನ್ನ ಕರೆಸಿ ಅವರ ಬಳಿ ಇರೋ ಮಾಹಿತಿ ಕಲೆಹಾಕಬೇಕು. ಮಾದಕವಸ್ತು ಅಡ್ಡೆಗಳ ಮೇಲೆ ದಾಳಿ ಮಾಡಬೇಕು ಎಂದು ಹೇಳಿದ್ದಾರೆ. ಈ ವಿಚಾರದ ಕುರಿತು ವಕೀಲ ನಾರಾಯಣಸ್ವಾಮಿಯವರು ನಗರ ಪೊಲೀಸ್ ಆಯುಕ್ತ ದಯಾನಂದ್ ರಿಗೆ ದೂರು ನೀಡಿದ್ದಾರೆ.