ಬೆಂಗಳೂರು : ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಬಳಕೆ ನಿರ್ಬಂಧಿಸಿದ್ದರೂ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇಡ್ಲಿಇತ್ಯಾದಿ ಆಹಾರ ಪದಾರ್ಥಗಳ ತಯಾರಿಕೆಯಲ್ಲಿಇದರ ಬಳಕೆ ಹೆಚ್ಚಾಗಿದ್ದು, ಕೇಟರಿಂಗ್ ಮೂಲಕ ವಿತರಣೆಯಾಗುವ ಆಹಾರದಲ್ಲಿ ರಾಗಿ ಮುದ್ದೆ ತಣ್ಣಾಗಾಗದಂತೆ ಬಿಸಿಯಾಗಿಡಲು ಪ್ಲಾಸ್ಟಿಕ್ ಪೇಪರ್ನಲ್ಲಿ ಸುತ್ತಿ ಬಡಿಸುತ್ತಿರುವುದು ತೀವ್ರ ಕಳವಳಕಾರಿಯಾಗಿದೆ.
ಜಿಲ್ಲೆಯಾದ್ಯಂತ ಸಾಕಷ್ಟು ಅಂಗಡಿಗಳಲ್ಲಿ ನಿತ್ಯ ಬಳಕೆ ವಸ್ತುಗಳನ್ನು ಖರೀದಿಸಿದ ನಂತರ ಜನರು ಮನೆಗೆ ತೆಗೆದುಕೊಂಡು ಹೋಗಲು ಅಂಗಡಿ ಮಾಲೀಕರು ರಾಜಾರೋಷವಾಗಿ ನಿಷೇಧಿತ ಪ್ಲಾಸ್ಟಿಕ್ ಕವರ್ಗಳನ್ನು ಯಥೇಚ್ಛವಾಗಿ ಬಳಕೆ ಮಾಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಸರ್ಕಾರ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಮಾರಾಟ, ಸಾಗಟ ನಿಷೇಧಿಸಿದ್ದರೂ, ಇದನ್ನು ತಡೆಯುವ ಕಾರ್ಯಕ್ಕೆ ಸರ್ಕಾರ ಮುಂದಾಗದಿರುವುದು ಪ್ಲಾಸ್ಟಿಕ್ ಮಾರಾಟ ಪ್ರಮಾಣ ಹೆಚ್ಚಲು ಕಾರಣವಾಗುತ್ತಿದೆ.
ಜಿಲ್ಲೆಯಲ್ಲಿ ಬೀಳುವುದೇ ಕಡಿವಾಣ?: ನಿಷೇಧಿತ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಅಧಿಕಾರಿಗಳು, ಇದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ತಾಪಂ ಇಒ, ಗ್ರಾಪಂ ಪಿಡಿಒಗಳ ನೇತೃತ್ವದಲ್ಲಿತಂಡಗಳನ್ನು ರಚಿಸಿ, ನಿಷೇಧಿತ ಏಕಬಳಕೆ ವಸುಗಳನ್ನು ಸಂಗ್ರಹಿಸುತ್ತಿರುವ, ಉತ್ಪಾದಿಸುತ್ತಿರುವ ಹಾಗೂ ಮಾರಾಟ ಮಾಡುತ್ತಿರುವ ಮಳಿಗೆ, ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಕಂಡುಬಂದಲ್ಲಿ ಜಪ್ತಿ ಮಾಡಿ,ದಂಡ ಹಾಗೂ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ ನೀಡಿದೆ. ಆದರೆ, ಈ ಕಾರ್ಯ ಎಷ್ಟರಮಟ್ಟಿಗೆ ನಡೆಯುತ್ತೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಾಗಿ ಮುದ್ದೆಗೂ ಪ್ಲಾಸ್ಟಿಕ್!: ಮದುವೆ, ಸಭೆ, ಸಮಾರಂಭಗಳಲ್ಲಿ ಜನರಿಗೆ ಕೇಟರಿಂಗ್ ಮೂಲಕ ಊಟದ ವ್ಯವಸ್ಥೆ ಮಾಡುವ ಪದ್ಧತಿ ನಗರ ಮಾತ್ರವಲ್ಲದೆ, ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿದೆ. ಕೇಟರಿಂಗ್ ಮೂಲಕ ಪೂರೈಕೆಯಾಗುವ ಊಟದಲ್ಲಿ ಮುದ್ದೆ ತಣ್ಣಾಗದಂತೆ ಬಿಸಿಯಾಗಿರಲು ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಊಟಕ್ಕೆ ಬಡಿಸಲಾಗುತ್ತಿದೆ. ಹೋಳಿಗೆಯನ್ನು ಪ್ಲಾಸ್ಟಿಕ್ ಕವರ್ನಲ್ಲಿಸುತ್ತಿ ಬಡಿಸಲಾಗುತ್ತಿದೆ. ಹೋಟೆಲ್ಗಳಲ್ಲಿಇಡ್ಲಿ ಬೇಯಿಸಲು ತಟ್ಟೆಯ ತಳಭಾಗಕ್ಕೆ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಸಾಕಷ್ಟು ಹೋಟೆಲ್ಗಳಲ್ಲಿ ತಟ್ಟೆಯ ತಳಭಾಗಕ್ಕೆ ಪ್ಲಾಸ್ಟಿಕ್ ಕವರ್ ಹಾಕಿ ಊಟ, ಟಿಫನ್ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಮೇಲೆ ಬಿಸಿ ಆಹಾರ ಪದಾರ್ಥ ಹಾಕುವುದರಿಂದ ಆಹಾರದಲ್ಲಿ ಬೆರೆತ ಪ್ಲಾಸ್ಟಿಕ್ ಮನುಷ್ಯ ಹೊಟ್ಟೆಗೆ ಸೇರಿ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳು ಸದ್ದಿಲ್ಲದೆ ಆವರಿಸಿಕೊಳ್ಳುತ್ತಿವೆ.
ಕಣ್ಣು ಮುಚ್ಚಿ ಕುಳಿತ ಸರ್ಕಾರ: ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ಮಾರಾಟ, ಸಾಗಾಟ ತಡೆಯುವುದು ಸ್ಥಳೀಯ ನಗರಸಭೆ, ಪುರಸಭೆ, ಪಪಂ ಹಾಗೂ ಗ್ರಾಪಂ ಆಡಳಿತದ ಜವಾಬ್ದಾರಿಯಾಗಿದೆ. ಆದರೆ ಇವು ಕಣ್ಣು ಮುಚ್ಚಿ ಕುಳಿತಿವೆ. ಕೆಲವೊಮ್ಮೆ ಕಾಟಾಚಾರಕ್ಕೆ ದಾಳಿ ನಡೆಸಿ ಕೈ ತೊಳೆದುಕೊಳ್ಳುತ್ತಿರುವುದು ಬಿಟ್ಟರೆ ಮಾರಾಟವನ್ನು ಪೂರ್ಣ ಪ್ರಮಾಣದಲ್ಲಿತಡೆಯುವ ಕಾರ್ಯಕ್ಕೆ ಮುಂದಾಗಿಲ್ಲ. ಪ್ಲಾಸ್ಟಿಕ್ ಪರಿಸರ, ಮನುಷ್ಯ, ಪ್ರಾಣಿ ಪಕ್ಷಿಗಳ, ಕುಡಿಯವ ನೀರಿನ ಮೂಲಗಳು, ಜಲಚರಗಳ ಮೇಲೆ ವ್ಯತಿರಿಕ್ತ ದುಷ್ಪರಿಣಾಮ ಬೀರುತ್ತಿದ್ದರೂ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲದ ವಿಷಯ ಎಂದು ಕೈಕಟ್ಟಿ ಕುಳಿತಿರುವುದು ಕಳವಳಕಾರಿಯಾಗಿದೆ.