ಅಂಬೆಗಾಲಿಡುವ ಮಗುವೊಂದು ಹಾವನ್ನು ಕಚ್ಚಿ ಕೊಂದಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ಜಮುಹರ್ ಗ್ರಾಮದಲ್ಲಿ ನಡೆದಿದ್ದು, ಮಗು ಅಪಾಯದಿಂದ ಪಾರಾಗಿದೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಿಕ ಸಾಕಷ್ಟು ಮಂದಿ ಮಗುವನ್ನು ಕಾಣಲು ಬರುತ್ತಿದ್ದಾರೆ ಎನ್ನಲಾಗಿದೆ.
ಮಗು ಟೆರೇಸ್ನಲ್ಲಿ ಆಟವಾಡುತ್ತಿದ್ದಾಗ ಹಾವನ್ನು ಕಂಡು ಆಟವಾಡುವ ಸಾಮಗ್ರಿ ಎಂದು ತಿಳಿದು ಕಚ್ಚಿದೆ. ಹಾವು ಸಾವನ್ನಪ್ಪಿದ್ದು, ಬಾಲಕ ಅಪಾಯದಿಂದ ಪಾರಾಗಿರುವುದು ಆತನ ಕುಟುಂಬ ಹಾಗೂ ವೈದ್ಯರಿಗೆ ಅಚ್ಚರಿ ಮೂಡಿಸಿದೆ.
ಮಗು ಹಾವನ್ನು ಜಗಿಯುತ್ತಿರುವುದನ್ನು ಕಂಡ ಕೂಡಲೇ ತಾಯಿ ಅದನ್ನು ಮಗುವಿನ ಬಾಯಿಯಿಂದ ತೆಗೆದು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿ ಮಗುವನ್ನು ಪರೀಕ್ಷಿಸಿ ದೈಹಿಕವಾಗಿ ಯಾವುದೇ ಹಾನಿಯಿಲ್ಲ ಎಂದು ದೃಢಪಡಿಸಿ, ಮಗು ಆರೋಗ್ಯವಾಗಿರುವುದಾಗಿ ಘೋಷಿಸಿದರು.
ಈ ಹಾವು ವಿಷಕಾರಿಯಲ್ಲ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ. ವ್ಯಕ್ತಿಯೊಬ್ಬ ಮಗುವಿನ ಬಾಯಿಯನ್ನು ತೆರೆಯುವಂತೆ ಪ್ರಯತ್ನಿಸಿದನು. ಸತ್ತ ಹಾವಿನ ಚಿತ್ರವನ್ನೂ ವಿಡಿಯೋದಲ್ಲಿ ತೋರಿಸಲಾಗಿದೆ.
ಇನ್ನೊಂದು ಘಟನೆಯಲ್ಲಿ ಕಳೆದ ತಿಂಗಳು ಬಿಹಾರದ ರಜೌಲಿಯಲ್ಲಿ ಹಾವೊಂದು ವ್ಯಕ್ತಿಯೊಬ್ಬನಿಗೆ ಕಚ್ಚಿದ್ದು, ಬಳಿಕ ಹಾವು ಸಾವನ್ನಪ್ಪಿತ್ತು. ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸರಿಯಾದ ವೈದ್ಯಕೀಯ ಚಿಕಿತ್ಸೆಯಿಂದ ವ್ಯಕ್ತಿ ಬದುಕಿ ಉಳಿದನು.
ಉತ್ತರ ಪ್ರದೇಶದ ಸೌರಾ ಗ್ರಾಮದಲ್ಲೂ 24 ವರ್ಷದ ವಿಕಾಸ್ ದುಬೆ ಎಂಬವರಿಗೆ ಹಾವು ಪದೇ ಪದೇ ಕಚ್ಚಿದ ವಿಲಕ್ಷಣ ಪ್ರಕರಣ ನಡೆದಿತ್ತು. ಸುಮಾರು 40 ದಿನಗಳಲ್ಲಿ ವಿಕಾಸ್ಗೆ ಏಳು ಬಾರಿ ಹಾವು ಕಚ್ಚಿತ್ತು.
ಜೂನ್ 2 ರಂದು ದುಬೆ ತನ್ನ ನಿವಾಸದಲ್ಲಿ ಹಾಸಿಗೆಯಿಂದ ಎದ್ದ ತಕ್ಷಣ ಹಾವು ಕಚ್ಚಿದ್ದು, ಅವರನ್ನು ಪಕ್ಕದ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಜೂನ್ 2 ರಿಂದ ಜುಲೈ 6 ರ ನಡುವೆ ದುಬೆ ಅವರು ಆರು ಬಾರಿ ಹಾವು ಕಡಿತಕ್ಕೆ ಒಳಗಾಗಿದ್ದರು.