ಮೈಸೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಸಿಎಂ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು. ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಿಷ್ಠ ನಾಯಕರು. ಹುದ್ದೆಯೇ ಖಾಲಿ ಇಲ್ಲದಿರುವಾಗ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದು ಸ್ವಪಕ್ಷೀಯ ಸಿಎಂ ಆಕಾಂಕ್ಷಿಗಳಿಗೆ ಟಾಂಗ್ ಕೊಟ್ಟರು. ಮುಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಏಕಸದಸ್ಯ ವಿಚಾರಣಾ ಆಯೋಗ ತನಿಖೆ ನಡೆಸುತ್ತಿದೆ. ಸುಮಾರು ಎಷ್ಟು ಲಕ್ಷ ಡಾಕ್ಯುಮೆಂಟ್ ಕಲೆಕ್ಟ್ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ದೇಸಾಯಿ ಆಯೋಗ ಲಕ್ಷದಷ್ಟು ಡಾಕ್ಯುಮೆಂಟ್ ಪರಿಶೀಲನೆ ನಡೆಸುತ್ತಿದೆ ಎಂದರು. ಮಾಜಿ ಮುಡಾ ಆಯುಕ್ತ ಡಿ.ಬಿ.ನಟೇಶ್ ಅವರನ್ನು ಅಮಾನತು ಮಾಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ತನಿಖಾ ವರದಿ ಬರುವವರೆಗೂ ಎಲ್ಲವನ್ನು ಕಾಯ್ದುನೋಡಿ ಎಂದರು. ಜಿ.ಟಿ.ದಿನೇಶ್ ಕುಮಾರ್ ಅಮಾನತುಪಡಿಸಿದರೂ ಕಷ್ಟ, ಮಾಡದಿದ್ದರೂ ಕಷ್ಟ. ಮುಡಾದಲ್ಲಿ ಅಕ್ರಮ ನಡೆಸಿರುವ ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸುತ್ತೇವೆ. ಮೇಲ್ನೋಟಕ್ಕೆ ಈ ಹಿಂದಿನ ಆಯುಕ್ತರು ತಪ್ಪು ಮಾಡಿರುವ ಬಗ್ಗೆ ಇಲಾಖೆ ವರದಿ ನೀಡಿರುವ ಕಾರಣ ದಿನೇಶ್ ಕುಮಾರ್ ಅವರನ್ನು ಅಮಾನತುಪಡಿಸಲಾಗಿದೆ. ದೇಸಾಯಿ ವರದಿಯ ಆಧಾರದ ಮೇಲೆ ಅಮಾನತುಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು. ದೇಸಾಯಿ ಆಯೋಗ ಈಗಾಗಲೇ ಎಲ್ಲೆಲ್ಲಿ ತಪ್ಪಾಗಿದೆ. ಯಾವ ಹಂತದಲ್ಲಿ ನಿಯಮಗಳು, ಕಾನೂನು ಬದಿಗೊತ್ತಿ ತೀರ್ಮಾನ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದೆ. ತನಿಖೆ ಪೂರ್ಣಗೊಂಡು ವರದಿ ಕೈ ಸೇರಬೇಕಿದೆ ಎಂದರು. ಮುಡಾದಲ್ಲಿ ಆಗಿರುವ ಎಲ್ಲಾ ನಿವೇಶನಗಳ ಹಂಚಿಕೆ, ಅಕ್ರಮದ ಕುರಿತು ಪಿ.ಎನ್.ದೇಸಾಯಿ ಏಕ ಸದಸ್ಯ ವಿಚಾರಣಾ ಆಯೋಗದಿಂದ ತನಿಖೆ ನಡೆಯುತ್ತಿದೆ. ಹೀಗಾಗಿ, ಮುಡಾದ ಯಾವ ವಿಚಾರದ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ತನಿಖೆಯ ಹಂತದಲ್ಲಿ ಹೆಚ್ಚು ಮಾತನಾಡುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಡಾದ ಶೇ.50:50 ನಿವೇಶನ ಹಂಚಿಕೆಯಲ್ಲಿ ಪ್ರಾಸಿಕ್ಯೂಷನ್ ಅನುಮತಿ ಒತ್ತಡದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಹೋದ ಮೂರೇ ದಿನದಲ್ಲಿ ನಗರಾಭಿವೃದ್ಧಿ ಸಚಿವರು ದೇವರ ಮೊರೆ ಹೋಗಿದ್ದಾರೆ. ಚಾಮುಂಡೇಶ್ವರಿ,ಶಿ ್ರೀಕಂಠೇಶ್ವರನಲ್ಲಿ ವಿಶೇಷ ಪೂಜೆ ಮಾಡಿಸಿ ಸಂಕಷ್ಟದಿಂದ ಪಾರು ಮಾಡುವಂತೆ ಕೋರಿದರು.