ಬೆಂಗಳೂರು, ಸೆ.24: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಹಾರ ಪದಾರ್ಥಗಳಲ್ಲಿ ಕೆಮಿಕಲ್ ಬಣ್ಣ ಬಳಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದ್ದು, ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ಒಳ್ಳೆಯದಾ, ಇಲ್ಲವಾ ಎನ್ನುವ ಬಗ್ಗೆ ಅನುಮಾನ ಶುರುವಾಗಿದೆ. ಹೌದು, ಇಷ್ಟು ದಿನ ಪಾನಿಪುರಿ, ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್ ಹಾಗೂ ಕಾಫಿಪುಡಿಯಲ್ಲಿ ಕೆಮಿಕಲ್ ಬಳಸುತ್ತಿರುವುದು ಧೃಡವಾಗಿತ್ತು. ಈ ಕುರಿತಾಗಿ ಆಹಾರ ಗುಣಮಟ್ಟ ಇಲಾಖೆ ಅಗತ್ಯ ಕ್ರಮಗಳನ್ನ ಕೂಡ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಬೆಲ್ಲದಲ್ಲಿಯೂ ಕೂಡ ಕಲಬೆರಕೆ ಬಣ್ಣ ಬಳಸಿರುವುದು ದೃಢವಾಗಿದೆ.
ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್ ಬಳಸುತ್ತಿರುವುದು ದೃಢ
ಹೌದು, ಸಧ್ಯ ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ಮಾಡಿದ್ದು ಖಚಿತವಾಗಿದ್ದು, ಇದರ ಬೆನ್ನಲ್ಲೇ ಬೆಲ್ಲದಲ್ಲಿಯೂ ಕಲಬೆರಕೆಯ ಕೃತಕ ಬಣ್ಣ ಬಳಕೆ ಮಾಡಿರುವುದು ದೃಢವಾಗಿವಾಗಿದೆ. ಕೆಲ ದಿನಗಳ ಹಿಂದೆ ಆಹಾರ ಹಾಗೂ ಗುಣಮಟ್ಟ ಇಲಾಖೆ ವಿವಿಧ ಬೆಲ್ಲವನ್ನ ಸಂಗ್ರಹಿಸಿ ಬೆಲ್ಲವನ್ನ ಲ್ಯಾಬ್ ರಿಪೋರ್ಟ್ಗೆ ಕಳುಹಿಸಲಾಗಿತ್ತು. ಈ ವೇಳೆ ಬೆಲ್ಲದಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದು ಪತ್ತೆಯಾಗಿದೆ. ಇನ್ನು ಸದರಿ ಬೆಲ್ಲವನ್ನ ಉಪಯೋಗಿಸಿದರೆ ಆರೋಗ್ಯದ ಮೇಲೆ ಮಾರಕ ಪರಿಣಾಮಗಳು ಉಂಟಾಗಲಿದೆಯಂತೆ.
ಬೆಲ್ಲವನ್ನ ಬಳಸುವಾಗ ಪರಿಶೀಲಿಸಿ ಬಳಸಲು ಸೂಚನೆ
ದೇವಸ್ಥಾನಗಳಲ್ಲಿ ಹೆಚ್ಚಾಗಿ ಪ್ರಸಾದಕ್ಕೆ ಬೆಲ್ಲ ಬಳಕೆಯಾಗಲಿದ್ದು, ಹೀಗಾಗಿ ಬೆಲ್ಲವನ್ನ ಬಳಸುವಾಗ ಪರಿಶೀಲಿಸಿ ಬಳಸಲು ಮುಜರಾಯಿ ಇಲಾಖೆ ಧಾರ್ಮಿಕ ಹಾಗೂ ದತ್ತಿ ಇಲಾಖೆ ಆಯುಕ್ತರಿಗೆ ಆಹಾರ ಸುರಕ್ಷತೆ ಆಯುಕ್ತರು ಪತ್ರ ಬರೆದಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಸಾರ್ವಜನಿಕರು, ‘ಬೆಲ್ಲದಲ್ಲಿ ಕಲಬೆರಕೆಯ ಬಣ್ಣ ಬಳಸಿದ್ದಾರೆ ಎಂದು ಹೇಳುತ್ತಿದ್ದಾರೆ. ಬೆಲ್ಲವನ್ನ ಸಿಹಿ ಅಡುಗೆಗಳಿಗೆ ಹೆಚ್ಚಾಗಿ ಬಳಸುತ್ತೇವೆ. ಆದ್ರೆ, ಇದರಲ್ಲೂ ಬಣ್ಣ ಬಳಕೆ ಮಾಡಿದರೆ ಹೇಗೆ ಬಳಸೋದು. ಈ ಕುರಿತಾಗಿ ಸರ್ಕಾರ ಹಾಗೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ, ದಿನದಿಂದ ದಿನಕ್ಕೆ ಕಲಬೆರಕೆಯ ಹಾವಳಿ ಹೆಚ್ಚಾಗುತ್ತಿದ್ದು, ಆರೋಗ್ಯದ ದೃಷ್ಟಿಯಿಂದ ಆಹಾರ ಮತ್ತು ಗುಣಮಟ್ಟ ಇಲಾಖೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ.