ಮೈಸೂರು: ಮೈಸೂರಿನ ಹೊರವಲಯದಲ್ಲಿ ನಡೆದಿರುವ ರೇವ್ ಪಾರ್ಟಿ ವಿಚಾರವಾಗಿ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಪೊಲೀಸರ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಎಸ್ಪಿ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ನಂತರ ಮಾತನಾಡಿದ ಅವರು, ನನಗೆ ಸ್ನೇಹಮಹಿ ಕೃಷ್ಣ ಯಾರು ಎಂಬುದೇ ಗೊತ್ತಿಲ್ಲ. ನಾನು ಇವತ್ತಿನವರೆಗೂ ಅವರನ್ನ ನೋಡಿಯೇ ಇಲ್ಲ. ಅವರ ಮೇಲೆ ಏನೇನು ಕೇಸ್ ಗಳಿದೆ ಅದು ನನಗೆ ಗೊತ್ತಿಲ್ಲ. ಅವರು ಇಡಿ ಕೇಸ್ ಕೊಟ್ಟಿರಬಹುದು. ಕೇಸ್ ಕೊಟ್ಟ ತಕ್ಷಣ ಅದು ತನಿಖೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೊಟ್ಟಿದ್ದಾರೆ ಕೊಡಲಿ ಬಿಡಿ. ಈಗ ಮುಡಾ ವಿಚಾರ ನ್ಯಾಯಾಲಯದಲ್ಲಿದೆ, ಇದರ ಬಗ್ಗೆ ಹೆಚ್ಚು ಕಾಮೆಂಟ್ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಲೋಕಾಯುಕ್ತ ಎಡಿಜಿಪಿ ಮತ್ತು ಕುಮಾರಸ್ವಾಮಿ ನಡುವೆ ಜಟಾಪಟಿ ವಿಚಾರವಾಗಿ ಮಾತನಾಡಿದ ಸಿಎಂ ಕುಮಾರಸ್ವಾಮಿಯನ್ನು ಎಡಿಜಿಪಿ ಹಂದಿ ಎಂದು ಕರೆದಿದ್ದಾರಾ. ಇಲ್ಲಾ ತಾನೇ, ಅವರು ಇಂಗ್ಲೀಷ್ ನ ಬರ್ನಾಡ್ ಶಾರ ವ್ಯಾಕ್ಯವನ್ನ ಉಲ್ಲೇಖಿಸಿದ್ದಾರೆ ಅಷ್ಟೇ. ಕುಮಾರಸ್ವಾಮಿ ಎಡಿಜಿಪಿ ಮೇಲೆ ಕೆಲವೊಂದಿಷ್ಟು ಆರೋಪ ಮಾಡಿದ್ದರು.
ಅದಕ್ಕೆ ಕೆಲವು ಉತ್ತರಗಳನ್ನ ಕೊಟ್ಟಿದ್ದಾರೆ. ಹಂದಿ ಎನ್ನುವ ಪದವನ್ನ ಕುಮಾರಸ್ವಾಮಿ ಅವರಿಗೆ ಬಳಸಿದ್ದಾರೆ ಎಂದು ಹೇಗೆ ಹೇಳುತ್ತೀರಾ. ನಾನು ಈ ವಿಚಾರದ ಬಗ್ಗೆ ಸುದೀರ್ಘ ವಿವರಣೆ ನೀಡುವುದಿಲ್ಲ. ಅದರಲ್ಲೂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದ್ದೇನೆ. ಕುಮಾರಸ್ವಾಮಿ ತಪ್ಪು ಮಾಡಿ ಬಿಟ್ಟಿದ್ದಾರೆ. ಹೀಗಾಗಿ ಬೇರೆಯವರ ಮೇಲೆ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ ಅಷ್ಟೇ ಸಿದ್ದರಾಮಯ್ಯ ಹೇಳಿದರು.