ಮೈಸೂರು ಅ 03 ಮೈಸೂರು ದಸರಾ ಜನರ ಹಬ್ಬವಾಗಿದ್ದು ಹೆಚ್ಚು ಜನರು ಭಾಗವಹಿಸುವ ಮೂಲಕ ದಸರಾ ಯಾಶಸ್ವಿಗೊಳಿಸಿ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನಿಂದ 9 ದಿನಗಳ ಕಾಲ ನವರಾತ್ರಿ ಹಾಗೂ 10 ನೆಯ ದಿನ ವಿಜಯದಶಮಿ ನಡೆಯುತ್ತದೆ. ನಾಡಹಬ್ಬ ದಸರಾ ಉದ್ದೇಶ ಶಿಷ್ಟರ ರಕ್ಷಣೆ ಹಾಗೂ ದುಷ್ಟರ ಶಿಕ್ಷೆ ನೀಡುವುದು ಆಗಿದೆ ಎಂದರು.
ಮೈಸೂರು ದಸರಾ ಜನರ ಹಬ್ಬ. ದೇಶ ವಿದೇಶಗಳಿಂದ ಲಕ್ಷಾಂತರ ಜನ ದಸರಾ ವೀಕ್ಷಣೆಗೆ ಆಗಮಿಸುತ್ತಾರೆ. ಆಹಾರ ಮೇಳದಲ್ಲಿ ನೂರಾರು ಸ್ಟಾಲ್ ಗಳು ಇದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ ಕೆ ಹೆಚ್ ಮುನಿಯಪ್ಪ ಅವರು ಮಾತನಾಡಿ ಕರ್ನಾಟಕ ರಾಜ್ಯ ದೇಶದಲ್ಲಿ 7 ಕೋಟಿ ಜನರು ಇದ್ದು ಇವರಲ್ಲಿ 4.5 ಕೋಟಿ ಜನರಿಗೆ ಅನ್ನ ಭಾಗ್ಯ ಯೋಜನೆಯಡಿ ಪಡಿತರ ನೀಡಲಾಗುತ್ತಿದೆ. ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ ಜಿ ಅಕ್ಕಿ ನೀಡಲು ಅನ್ನ ಭಾಗ್ಯ ಯೋಜನೆಯಡಿ ಇದ್ದು ಇದರಲ್ಲಿ 5 ಕೆ ಜಿ ಅಕ್ಕಿ ಹಾಗೂ ಉಳಿದ 5 ಕೆ ಜಿ ಅಕ್ಕಿಗೆ ಹಣ ನೀಡಲಾಗುತ್ತಿದೆ ಎಂದರು.
ಆಹಾರ ಮೇಳದಲ್ಲಿ 108 ಮಳಿಗೆಗಳನ್ನು ತೆರೆಯಲಾಗಿದೆ. ಮಳಿಗೆ ಗಳು ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತವೆ. 130 ಬಗೆಯ ವಿವಿಧ ತಿಂಡಿಗಳನ್ನು ಇಲ್ಲಿ ಸವಿಯಬಹುದಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಡಿ ತಿಮ್ಮಯ್ಯ ಅವರು ಮಾತನಾಡಿ ಮನುಷ್ಯ ಬದುಕಲು ಗಾಳಿ ನೀರು ಆಹಾರ ಬಹಳ ಮುಖ್ಯ. ಆಹಾರ ಪದಾರ್ಥಗಳನ್ನು ನಾವು ಬೆಳೆದು ಬೇರೆ ಬೇರೆ ಖಾದ್ಯಗಳನ್ನು ತಯಾರು ಮಾಡುತ್ತೇವೆ. ಆಹಾರದಲ್ಲಿ ಪ್ರೋಟಿನ್, ವಿಟಮಿನ್, ಕಾರ್ಬೊಹೈಡ್ರೇಟ್ ಇರುವ ಸಮತೋಲನ ಆಹಾರವನ್ನು ಸೇವಿಸಬೇಕು. ಆಗ ಮಾತ್ರ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಬಿಪಿ ಶುಗರ್ ಹೆಚ್ಚಾಗುತ್ತಿದೆ ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿ ಹಾಗೂ ಕೆಲಸದ ಒತ್ತಡ. ನಾವು ಹಿತ ಮಿತವಾಗಿ ಆಹಾರವನ್ನು ಸೇವನೆ ಮಾಡಬೇಕು. ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಉಪಸ್ಥಿತರಿದ್ದರು.