ಈಕೆಯು ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಪ್ರಬಲವಾದ ದೇವತೆ. “ಚಾಮುಂಡಿ” ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ-ಶಿಷ್ಟರಕ್ಷಕಿಯಾಗಿ ಮಹಿಷೂರಿನ ಮಹಿಷನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ ‘ಚಾಮುಂಡಿ’ಯಾಗಿದ್ದಾಳೆಂಬುದು ತಿಳಿಯುತ್ತದೆ.
ಈಕೆ- ಷೋಡಶಿ, ಅಂಬೆ, ಈಶ್ವರಿ, ಚಂಡಿ, ಕಾಳಿ, ಭಗವತೀ, ಮಹೇಶ್ವರಿ, ಮಹಾದೇವಿ, ತ್ರಿಪುರ ಸುಂದರಿ, ದುರ್ಗೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಚಾಮುಂಡಿ ಮಹಿಷಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿ ದ್ದಾಳೆ. ಚಾಮುಂಡಿ ಬೆಟ್ಟವು ಸಮುದ್ರಮಟ್ಟಕ್ಕಿಂತ ಸುಮಾರು-೩೪೮೯ಅಡಿ ಎತ್ತರದಲ್ಲಿದೆ.
ಮೈಸೂರಿನ ದೊಡ್ಡದೇವರಾಜ ಒಡೆಯರ್ ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲ ವಾಗಲೆಂದು ೧೧೦೧ ಮೆಟ್ಟಿಲುಗಳನ್ನು ಕಟ್ಟಿಸಿ, ೭೦೦ನೇ ಮೆಟ್ಟಿಲ ಬಳಿ ಬೃಹತ್ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಆಶ್ವಯುಜ ಶುಕ್ಲಪಕ್ಷದ ನವರಾತ್ರಿಯ ಸಮಯದಲ್ಲಿ ಭಾರತಾದಾದ್ಯಂತ ಚಾಮುಂಡಿ ಆರಾಧನೆ “ದುರ್ಗೆ”ಯ ಹೆಸರಿನಲ್ಲಿ ಬಹಳ ವೈಭವಯುತವಾಗಿ ನಡೆಯುತ್ತದೆ.
ನವರಾತ್ರಿ ದಿನಗಳಲ್ಲಿ ಅಷ್ಟಲಕ್ಷ್ಮೀಯರ, ಅಷ್ಟದುರ್ಗೆಯರ ಆರಾಧನೆಯನ್ನು ಚಾಮುಂಡಿ ಬೆಟ್ಟದಲ್ಲಿರುವ ದೇಗುಲದಲ್ಲಿ ಮಾಡಲಾಗುತ್ತದೆ. ನವ ದಿನವು ದೇವಿಗೆ ವಿಶಿಷ್ಟವಾದ ಅಲಂಕಾರಗಳನ್ನು, ಉಡುಗೆ-ತೊಡುಗೆ, ಆಭರಣಗಳಿಂದ ಚಾಮುಂಡೇಶ್ವರಿಯನ್ನು ಸಿಂಗರಿಸಿ ಭಕ್ತವೃಂದಕ್ಕೆ ಸಂತಸವನ್ನು ನೀಡುತ್ತಾರೆ.