ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯಕ್ಕೆ ಸಾಲು ಸಾಲು ಭೇಟಿ ನೀಡುವ ಕಾರ್ಯಕ್ರಮ ಕೈಗೊಂಡಿದ್ದಾರೆ. ಇದೇ ಮಾರ್ಚ್ 25ಕ್ಕೆ ಮತ್ತೊಮ್ಮೆ ಭೇಟಿ ನೀಡಲಿರುವ ಮೋದಿ ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ಸಹ ನಡೆಸಲಿದ್ದಾರೆ. ಇಂತಹ ಬ್ಯೂಸಿ ಶೆಡ್ಯೂಲ್ ನಡುವೆಯೂ ಜಪಾನ್ ಪ್ರಧಾನಿಯೊಂದಿಗೆ ಕಾಲಕಳೆದಿದ್ದಾರೆ.
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ (Fumio Kishida) ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದು, ಸೋಮವಾರ ಬೆಳಗ್ಗೆ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಸ್ವಾಗತಿಸಿದ್ದಾರೆ. ಬಳಿಕ ಮೋದಿ ಅವರೊಂದಿಗೆ ದೆಹಲಿಯ ಬುದ್ಧ ಜಯಂತಿ ಪಾರ್ಕ್ಗೆ ಭೇಟಿ ನೀಡಿ, ಬೋಧಿ ವೃಕ್ಷಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ಇದೇ ವೇಳೆ ಗೋಲ್ ಗಪ್ಪ ಮತ್ತು ಲಸ್ಸಿ ಸೇರಿದಂತೆ ಭಾರತೀಯ ಖಾದ್ಯಗಳನ್ನ ಸವಿದು ಸಂತಸಪಟ್ಟಿದ್ದಾರೆ.
15 ವರ್ಷಗಳ ಹಿಂದೆ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ದೆಹಲಿಗೆ ಭೇಟಿ ನೀಡಿ, ಇಂಡೋ-ಫೆಸಿಪಿಕ್ ಸಹಕಾರ ಕುರಿತಂತೆ ಮಾತನಾಡಿದ್ದರು. ಇದೀಗ ಫ್ಯೂಮಿಯೊ ಕಿಶಿದಾ G7 ಹಿರೋಶಿಮ ಶೃಂಗಸಭೆಗೆ ಪ್ರಧಾನಿ ಮೋದಿ ಅವರನ್ನ ಔಪಚಾರಿಕವಾಗಿ ಆಹ್ವಾನಿಸಿದ್ದಾರೆ.
ಇದೇ ವೇಳೆ ಭಾರತ ಮತ್ತು ಜಪಾನ್ ನಡುವೆ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ವಲಯದಲ್ಲಿ ಪರಸ್ಪರ ಸಹಕಾರ ಪಡೆಯುವ ಬಗ್ಗೆ ಮಾತುಕತೆ ನಡೆಸಿದರು. ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.