ಮೈಸೂರು: ಇದೇ ಬರುವ ಮಾರ್ಚ್ 26ರಂದು ಮೈಸೂರಿನಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗುವುದು. ಸಮಾವೇಶಕ್ಕೆ ಸುಮಾರು ಹತ್ತು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮೈಸೂರು ತಾಲೂಕಿನ ರಿಂಗ್ ರಸ್ತೆಯಲ್ಲಿರುವ ಶ್ರೀ ತ್ರಿಪುರಸುಂದರಮ್ಮಣಿ ದೇವಸ್ಥಾನದ ಪಕ್ಕದಲ್ಲಿರುವ ಮೈದಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು ಎಲ್ಲರೂ ಕೈಜೋಡಿಸಿ ಕೆಲಸ ಪ್ರಾರಂಭ ಮಾಡಿದ್ದಾರೆ. ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯದಾದ್ಯಂತ ಅತ್ಯುತ್ತಮವಾದ ರೀತಿಯ ಜನಬೆಂಬಲವನ್ನು ನಾಡಿನ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆಶೀರ್ವದಿಸಿದ್ದಾರೆ. ಅದಕ್ಕೆ ಪೂರಕವಾಗಿ ಜನತೆಯ ಬೆಂಬಲವನ್ನು ನಾನು ಕಳೆದ 3ತಿಂಗಳ ರಥಯಾತ್ರೆಯಲ್ಲಿ ಕಂಡಿದ್ದೇನೆ. ಅದು ಅಂತಿಮವಾಗಿ ಮೈಸೂರು ನಗರದಲ್ಲಿ ಸುಮಾರು 10 ಲಕ್ಷ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರ ಸಮಾವೇಶವಾಗಲಿದೆ. ಇದೇ ತಿಂಗಳು 26ನೇ ತಾರೀಖಿಗೆ ಸಮಾವೇಶ ನಡೆಸಲು ಸಿದ್ಧತೆ ನಡೆಯುತ್ತಿದೆ. ಬಹುಶಃ 26ರ ಕಾರ್ಯಕ್ರಮ ರಾಜ್ಯದ 2023ರ ಮೇ ತಿಂಗಳಿನಲ್ಲಿ ನಡೆಯತಕ್ಕಂತಹ ವಿಧಾನಸಭಾ ಚುನಾವಣೆಗೆ ಸರ್ಕಾರದ ಚುನಾವಣಾ ಪ್ರಚಾರ ಅಂತಲೇ ಹೇಳಬಯಸುತ್ತೇನೆ ಎಂದರು.
ಚುನಾವಣೆಯ ದಿನಾಂಕಗಳನ್ನು 26ರ ಆಸುಪಾಸಿನಲ್ಲಿ, ಏಪ್ರೀಲ್ ಮೊದಲನೇ ವಾರದಲ್ಲಿ ಚುನಾವಣಾ ಆಯೋಗ ಘೋಷಣೆ ಮಾಡಬಹುದೆಂದು ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರ ಹಿನ್ನೆಲೆಯಲ್ಲಿ ನಮ್ಮ ಪಂಚರತ್ನ ಯೋಜನೆಗಳನ್ನು ನಾಡಿನ ಜನತೆ ಈಗಾಗಲೇ ಸ್ವೀಕಾರ ಮಾಡಿದ್ದಾರೆ. ಈ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತ ಕಾರ್ಯಕ್ರಮಗಳು. ಕೆಲವು ಮಾಧ್ಯಮದ ಸ್ನೇಹಿತರು ಕೂಡ ಇದರ ಬಗ್ಗೆ ವಿಶ್ಲೇಷಣೆಗಳನ್ನು ಮಾಡಿರುವುದನ್ನು ಗಮನಿಸಿದ್ದೇನೆ. ಈ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿಯವರು ಚುನಾವಣೆಯಲ್ಲಿ ಗೆಲ್ಲಬೇಕೆನ್ನುವ ಗುರಿಯೇನಿದೆ? ಅದರಲ್ಲಿ ಬಹಳ ಶ್ರಮವಿದೆ. ಗುರಿಯನ್ನು ಮುಟ್ಟಿದರೆ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದರೆ ಕರ್ನಾಟಕ ರಾಜ್ಯದಲ್ಲಿ ಒಂದು ಸುವರ್ಣ ಬಾಗಿಲು ತೆಗೆಯತಕ್ಕಂತಹ ರಾಮರಾಜ್ಯವನ್ನು ಕಾಣಬಹುದು ಎನ್ನತಕ್ಕಂತಹದನ್ನು ಕೆಲವು ರಾಜಕೀಯ ವಿಶ್ಲೇಷಕರು ಬರೆದಿರುವುದನ್ನು ನೋಡಿದ್ದೇನೆ ಎಂದು ತಿಳಿಸಿದರು.
ನಾಡಿನ ಜನತೆಯ ಪ್ರತಿನಿತ್ಯದ ಸಮಸ್ಯೆಗಳನ್ನು ಗಮನಿಸಿ ಈ ಐದು ಕಾರ್ಯಕ್ರಮವನ್ನು ರಚನೆ ಮಾಡಿದ್ದೇನೆ. ಈ ಐದು ಕಾರ್ಯಕ್ರಮಗಳು ಹೊಸ ಕಾರ್ಯಕ್ರಮಗಳೇನಲ್ಲ. ಈಗಾಗಲೇ ಸರ್ಕಾರದ ವತಿಯಿಂದ ಸರ್ಕಾರಿ ಶಾಲೆಗಳೇನಿದೆ, ಸರ್ಕಾರಿ ಆಸ್ಪತ್ರೆಗಳು, ರೈತರಿಗೆ ಹಲವಾರು ರೀತಿಯ ಯೋಜನೆಗಳನ್ನು ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ದಲಿತರಿಗೆ , ಹಿಂದುಳಿದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ದೊಡ್ಡ ಮಟ್ಟದ ಹಣವನ್ನು ಹಂಚಿಕೆ ಮಾಡಿ ದೊಡ್ಡ ಸಾಧನೆ ಮಾಡಿದ್ದೇವೆ ಎನ್ನುವುದನ್ನು ಪಕ್ಷಗಳು ಹೇಳುತ್ತವೆ ಎಂದರು.
ನಾನು ಕಾಂಗ್ರೆಸ್ ಪಕ್ಷದ ವತಿಯಿಂದ ಕೊಡತಕ್ಕಂತಹ ಗ್ಯಾರಂಟಿ ಕಾರ್ಡ್ ನ ಕಾರ್ಯಕ್ರಮಗಳಾಗಲಿ, ಬಿಜೆಪಿಯವರು ಪ್ರತಿದಿನ ಬಹುಶಃ ನಾಲ್ಕು-ಐದು ಪೇಜು ಜಾಹೀರಾತುಗಳು ಬರುತ್ತಿವೆ. ಬಿಜೆಪಿ ಸರ್ಕಾರದಲ್ಲಿ ಅವರು ಕೊಟ್ಟಂತಹ ಕಾರ್ಯಕ್ರಮಗಳ ಕುರಿತು ಮಾತನಾಡಲ್ಲ. ಕಂದಾಯ ಸಚಿವ ಆರ್. ಅಶೋಕ್ ಅವರು ನಮ್ಮ ರಾಜ್ಯದಲ್ಲಿ ಇಂತಹ ಮುಖ್ಯಮಂತ್ರಿಗಳನ್ನು ನೋಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಬಹುಶಃ ಅದು ಸತ್ಯ ಯಾವ ಕಡೆಯಿಂದ ನೋಡಿದ್ದಾರೆ ಎನ್ನುವುದನ್ನು ಯೋಚಿಸುತ್ತಿದ್ದೇನೆ. ಇಂತಹ ಮುಖ್ಯಮಂತ್ರಿ ನಮ್ಮ ರಾಜ್ಯದಲ್ಲಿ ಬರಲೇ ಇಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೋ ಅಥವಾ ನಿಜಕ್ಕೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೋ ಇದು ಬಹಳ ಯೋಚನೆ ಮಾಡಬೇಕಾದ ಸಂದರ್ಭ ಎಂದು ಅಭಿಪ್ರಾಯಪಟ್ಟರು. ಈಗಿನ ಸರ್ಕಾರದ ನ್ಯೂನ್ಯತೆಗಳೇನಿದೆ ಅದರ ಬಗ್ಗೆ ಚರ್ಚೆ ಮಾಡಲು ಹೋಗಿಲ್ಲ. ಜನರಿಗೆ ಗೊತ್ತಿದೆ. ಇಂದು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪರಸ್ಪರ ಟೀಕೆಗಳಿಗೆ ಸಮಯ ಮೀಸಲಿಟ್ಟಿದ್ದಾರೆ. ನಾನು ನನ್ನ ಕಾರ್ಯಕ್ರಮದಲ್ಲಿ ಜನತೆಯ ಮುಂದೆ ಈಗಾಗಲೇ ಸುಮಾರು 86 ವಿಧಾನಸಭಾ ಕ್ಷೇತ್ರಗಳಿಗೆ, 50-60ಹಳ್ಳಿಗಳಿಗೆ ಭೇಟಿ ಕೊಟ್ಟು ದಿನಕ್ಕೆ 50ರಿಂದ 100ಕಿ.ಮೀ ಹಳ್ಳಿಗೆ ಭೇಟಿ ಕೊಡಬೇಕಾದರೆ ಪ್ರವಾಸ ಮಾಡಿದ್ದೇನೆ. ನನ್ನ ಕಾರ್ಯಕ್ರಮಕ್ಕೆ ಒಂದು ಅವಕಾಶ ಕೊಡಿ ಎಂದು ಮನವಿ ಸಲ್ಲಿಸಿ ಹೊರಟಿದ್ದೇನೆ. ಕಾಂಗ್ರೆಸ್ ಬಗ್ಗೆಯಾಗಲಿ, ಬಿಜೆಪಿ ಬಗ್ಗೆಯಾಗಲಿ ಟೀಕೆ ಮಾಡಿ ಸಮಯ ವ್ಯರ್ಥ ಮಾಡಲು ಹೋಗಿಲ್ಲ, ಟೀಕೆ ಮಾಡುವುದರಿಂದ ಜನರ ಸಮಸ್ಯೆಗೆ ಪರಿಹಾರ ದೊರಕಲ್ಲ. ನನಗೆ ಆದ ಅನುಭವದಲ್ಲಿ ನಾಡಿನ ಜನತೆ ನಿಜವಾದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಅದನ್ನು ಬಗೆ ಹರಿಸುವುದು ಹೇಗೆ ಎಂಬ ದೂರದೃಷ್ಟಿಯಿಂದ ಕೆಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿ ಅದಕ್ಕೆ ಸಿದ್ಧತೆಯನ್ನೂ ಮಾಡಿದ್ದೇನೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಉಪಸ್ಥಿತರಿದ್ದರು