ಬೆಂಗಳೂರು: ಜೆಡಿಎಸ್ನ 2ನೇ ಪಟ್ಟಿಯನ್ನು ಮಾರ್ಚ್ 26ರಂದು ಮೈಸೂರಿನಲ್ಲಿ ನಡೆಯುವ ಪಂಚರತ್ನ ಸಮಾರೋಪ ಸಮಾರಂಭದಲ್ಲಿ ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯ ಗುಂಗಲ್ಲಿ ಎಲ್ಲರೂ ಇದ್ದಾರೆ. 45 ದಿನಗಳಲ್ಲಿ ಚುನಾವಣೆ ನಡೆಯುತ್ತದೆ. ಎಲ್ಲಾ ಪಕ್ಷದಲ್ಲಿ ಅದರ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮ ಪಕ್ಷ ಕೂಡಾ ಚುನಾವಣೆ ಸಿದ್ಧತೆ ಮಾಡುತ್ತಿದೆ ಎಂದರು.
ಮೈಸೂರಿನಲ್ಲಿ ಮಾರ್ಚ್ 26ಕ್ಕೆ ಪಂಚರತ್ನ ಯಾತ್ರೆ ಸಮಾರೋಪ ಸಮಾವೇಶವಿದೆ. ಸಭೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಅಂದೇ ಪಕ್ಷದ 2ನೇ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.
2ನೇ ಪಟ್ಟಿ ಬಿಡುಗಡೆಯಲ್ಲಿ ಸುಮಾರು 50 ರಿಂದ 60 ಜನರ ಹೆಸರು ಬಿಡುಗಡೆಯಾಗಲಿದೆ. ಬೇರೆ ಪಕ್ಷದಂತೆ ಕಾಯುವ ತಂತ್ರಗಾರಿಕೆ ನಾನು ಮಾಡುವುದಿಲ್ಲ. ನಮ್ಮ 123 ಗುರಿಗೆ ಸಮರ್ಥ ಅಭ್ಯರ್ಥಿ ನಮ್ಮ ಬಳಿ ಇದ್ದಾರೆ. ಈಗಾಗಲೇ 123 ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ. 10-15 ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಕೊರತೆ ಕಂಡು ಬಂದರೂ ಆ ಕ್ಷೇತ್ರಗಳಲ್ಲೂ ಜೆಡಿಎಸ್ ಬಗ್ಗೆ ಒಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಅದನ್ನು ಸಂಘಟನಾತ್ಮವಾಗಿ ಮತ ಹಾಕಿಸಿಕೊಳ್ಳೋ ಶಕ್ತಿ ಇಲ್ಲ ಎಂದರು. ಬಿಜೆಪಿ-ಕಾಂಗ್ರೆಸ್ನಿAದ ಜೆಡಿಎಸ್ಗೆ ಸೇರ್ಪಡೆ ಆಗುವವರು ಇದ್ದಾರೆ. ಆ 2 ಪಕ್ಷದಲ್ಲಿ ಟಿಕೆಟ್ ಘೋಷಣೆ ಆಗಲಿ ಎಂದು ಕಾಯುತ್ತಿದ್ದಾರೆ. ನಮ್ಮ ಪಕ್ಷದಿಂದ ಹೋಗುವವರು ಹೋಗಿ ಆಯ್ತು. ಇನ್ಯಾರೂ ಹೋಗುವುದಿಲ್ಲ. 2 ಪಕ್ಷಗಳು ಟಿಕೆಟ್ ಘೋಷಣೆ ಮಾಡಿದ ಬಳಿಕ ಎಲ್ಲಾ ಪ್ರಕ್ರಿಯೆ ಪ್ರಾರಂಭ ಆಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ನವರು ಇಬ್ಬರು ಎಂಎಲ್ಸಿಗಳ ರಾಜೀನಾಮೆ ಕೊಟ್ಟು ಯಾಕೆ ಕರೆಸಿಕೊಂಡಿದ್ದಾರೆ? ಅವರಿಗೆ ಟಿಕೆಟ್ ಕೊಡೋಕೆ ಅಲ್ಲವಾ? ಹಾಗೇ ನಮಗೂ 10-15 ಕ್ಷೇತ್ರದಲ್ಲಿ ಸ್ವಲ್ಪ ಕೊರತೆ ಇದೆ. ಅಲ್ಲಿಗೆ ಸಮರ್ಥವಾದ ಅಭ್ಯರ್ಥಿ ಬಂದರೆ ಅವರನ್ನು ಸೇರ್ಪಡೆ ಮಾಡಿಳ್ಳುತ್ತೇವೆ ಎಂದರು.