ಮಂಡ್ಯ ನಗರದ ಕಿರಗಂದೂರು ಗೇಟ್ ಬಳಿ ಇರುವ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಡ್ಯ ಪೊಲೀಸರು ಸುಮಾರು 18 ಲಕ್ಷ ರೂ.ಗಳನ್ನು ವಶಪಡಿಸಿ ಕೊಂಡಿದ್ದಾರೆ.
ಯುಗಾದಿ ಹಬ್ಬ ಬಂತೆಂದರೆ ಮಂಡ್ಯದಲ್ಲಿ ಜೂಜಾಟ ಎಗ್ಗಿಲ್ಲದೆ ನಡೆಯುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ಅಕ್ರಮ ಜೂಜಾಟ ನಿಷೇಧಿಸಲಾಗಿದೆ.ಅಕ್ರಮ ಜೂಜಾಟದಲ್ಲಿ ಭಾಗಿಯಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಎಚ್ಚರಿಕೆ ನೀಡಿದ್ದರು.
ಎಸ್ಪಿ ಎನ್.ಯತೀಶ್ ಎಚ್ಚರಿಕೆ ನೀಡಿದ್ದರೂ ಮಂಡ್ಯದ ಪ್ರತಿಷ್ಟಿತ ಕ್ಲಬ್ ಗಳಲ್ಲಿ ಒಂದಾದ ಸ್ಪೋರ್ಟ್ಸ್ ಕ್ಲಬ್ ನಲ್ಲೂ ಜೂಜಾಟ ನಡೆಯುತ್ತಿತ್ತು.
ಈ ಬಗ್ಗೆ ಖಚಿತ ಮಾಹಿತಿ ಮೇಲೆ ಸ್ಪೋರ್ಟ್ಸ್ ಕ್ಲಬ್ ಮೇಲೆ ಮಧ್ಯಾಹ್ನ 2.30 ರ ಸಮಯದಲ್ಲಿ ದಾಳಿ ಮಾಡಿದ ಡಿವೈಎಸ್ಪಿ ಓಂ ಪ್ರಕಾಶ್ ನೇತೃತ್ವದಲ್ಲಿ ಸಿಪಿಐ ಎಲ್.ಅರುಣ್,ಎಸ್ಐಗಳಾದ ದೀಕ್ಷಿತ್ ಹಾಗೂ ವರ್ಷಾ ಅವರ ತಂಡ ಅಕ್ರಮ ಜೂಜಾಟದಲ್ಲಿ ಪಾಲ್ಗೊಂಡಿದ್ದ ಜನರಿಂದ 18 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದೆ.
ಜೂಜಾಟದಲ್ಲಿ ತೊಡಗಿದ್ದ 55 ವ್ಯಕ್ತಿಗಳ ಮೇಲೆ ಕೇಸು ದಾಖಲಿಸಲಾಗಿದ್ದು,ಎಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.