ಮೈಸೂರು: ಟಿ ನರಸೀಪುರ ತಾಲ್ಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿದ್ದ ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ. ಇದರಿಂದ ಸುತ್ತಮುತ್ತಲ ಗ್ರಾಮದ ಜನರು ನೆಮ್ಮದಿಂiÀi ನಿಟ್ಟುಸಿರು ಬಿಟ್ಟಿದ್ದಾರೆ.
ಟಿ ನರಸೀಪುರ ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಿದ್ದು, ಅಲ್ಲೊಂದು ಇಲ್ಲೊಂದು ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿದ್ದು, ಪ್ರತಿ ಬಾರಿಯೂ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಅದರಂತೆ ಅರಣ್ಯ ಅಧಿಕಾರಿಗಳು ಚಿರತೆ ಪ್ರತ್ಯಕ್ಷಗೊಂಡ ಗ್ರಾಮದಲ್ಲಿ ಬೋನ್ ಇರಿಸಿ ಚಿರತೆ ಸೆರೆ ಹಿಡಿಯುವ ಕಾರ್ಯ ಮಾಡುತ್ತಿದ್ದಾರೆ. ಅದರಂತೆ ತಡರಾತ್ರಿ ಬೋನಿನೊಳಗೆ ಚಿರತೆಯೊಂದು ಸೆರೆಯಾಗಿದೆ.
ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ಹಲವು ದಿನಗಳಿಂದ ಗ್ರಾಮದಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸಿದ್ದರಿಂದ ಜನರು ಆತಂಕಗೊಂಡಿದ್ದರು. ಚಿರತೆ ಉಪಟಳದಿಂದ ಮುಕ್ತಿ ನೀಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರ ನೀಡಿದ್ದರು. ಅದರಂತೆ ಅರಣ್ಯಾಧಿಕಾರಿಗಳು ಗ್ರಾಮದಲ್ಲಿ ಬೋನ್ ಇರಿಸಿದ್ದರು. ಸದ್ಯ ಈ ಬೋನಿನೊಳಗೆ ಚಿರತೆ ಸೆರೆಯಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆ ಸ್ಥಳಾಂತರಿಸಲಾಗಿದೆ.
ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ 4 ತಿಂಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. 2022ರ ಅ.31ರಂದು ಚಿರತೆ ದಾಳಿಗೆ ಎಂ.ಎಲ್. ಹುಂಡಿ ಗ್ರಾಮದ ಮಂಜುನಾಥ್ ಚೆನ್ನಮಲ್ಲಿಕಾರ್ಜುನ ಬೆಟ್ಟದಲ್ಲಿ ಮೃತಪಟ್ಟಿದ್ದಾರೆ. 2022ರ ಡಿ.1ರಂದು ಚಿರತೆ ದಾಳಿಯಿಂದ ಕೆಬ್ಬೆ ಹುಂಡಿ ಗ್ರಾಮದ ಮೇಘನಾ (23), 3 ದಿನದ ಹಿಂದೆ ಜ.20ರಂದು ಕನ್ನಾನಾಯಕನಹಳ್ಳಿಯಲ್ಲಿ ಚಿರತೆ ದಾಳಿಯಿಂದ ವೃದ್ಧೆ ಸಿದ್ದಮ್ಮ (60) ಸಾವನ್ನಪ್ಪಿದ್ದಾರೆ. 2023ರ ಜನವರಿ 22ರಂದು ಚಿರತೆ ದಾಳಿಗೆ 11 ವರ್ಷದ ಬಾಲಕ ಜಯಂತ್ ಸಾವನ್ನಪ್ಪಿದ್ದಾರೆ.
ಹಂದಿ ಬಲೆಗೆ ಬಿದ್ದ ಚಿರತೆ:
ಹಂದಿ ಹಿಡಿಯಲು ಹಾಕಿದ್ದ ಬಲೆಗೆ ಚಿರತೆಯೊಂದು ಸೆರೆಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಬಳಿ ನಡೆದಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ವಲಯ ಅರಣ್ಯಾಧಿಕಾರಿ ವಸಂತ ಕುಮಾರ್ ನೇತೃತ್ವದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿದ್ದರು.
ಬಲೆಗೆ ಸಿಲುಕಿದ್ದ 6ವರ್ಷದ ಹೆಣ್ಣು ಚಿರತೆಗೆ ಅರವಳಿಕೆ ನೀಡಿ ರಕ್ಷಿಸಿ ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಲಾಗಿದೆ. ಅಲ್ಲದೆ, ಅಕ್ರಮ ಬಲೆ ಹಾಕಿದ್ದ ಜಮೀನು ಮಾಲೀಕ ಫಯಾಸ್ ಮತ್ತು ಶಿವಣ್ಣ ವಿರುದ್ಧ ದೂರು ದಾಖಲಾಗಿದೆ.