ಮನೆಗೆ ಅತಿಥಿಗಳು ಬಂದಾಗ ತಕ್ಷಣಕ್ಕೆ ಏನಾದರೂ ಸಿಹಿ ತಿಂಡಿಯನ್ನು ಮಾಡಬೇಕಾಗಿ ಬರುತ್ತದೆ. ಈ ಸಂದರ್ಭದಲ್ಲಿ ಸಿಂಪಲ್ ಆದ ರೆಸಿಪಿಯ ಹುಡುಕಾಟದಲ್ಲಿ ನೀವಿದ್ದರೆ ಒಮ್ಮೆ ಅವಲಕ್ಕಿಯ ಲಾಡು ಮಾಡಿ ನೋಡಿ. ಕೇವಲ ಅತಿಥಿಗಳಿಗೇ ಏಕೆ? ಹಬ್ಬದ ಸಂದರ್ಭಗಳಲ್ಲಿ ಇಲ್ಲವೇ ವಿಶೇಷ ದಿನಗಳಲ್ಲಿ ನೀವಿದನ್ನು ಮಾಡಿ ಎಲ್ಲರಿಗೂ ಹಂಚಬಹುದು. ಸುಲಭ ಹಾಗೂ ತ್ವರಿತವಾಗಿ ಮಾಡಬಹುದಾದ ಅವಲಕ್ಕಿ ಲಾಡು ಮಾಡುವುದು ಹೇಗೆಂದು ಇಲ್ಲಿ ತಿಳಿಸಲಾಗಿದೆ.
ಬೇಕಾಗುವ ಪದಾರ್ಥಗಳು:
ಅವಲಕ್ಕಿ – 1 ಕಪ್
ಸಕ್ಕರೆ – ಅರ್ಧ ಕಪ್
ತುಪ್ಪ – ಕಾಲು ಕಪ್
ಒಣ ತೆಂಗಿನ ತುರಿ – ಅರ್ಧ ಕಪ್
ಗೋಡಂಬಿ ಹಾಗೂ ಒಣ ದ್ರಾಕ್ಷಿ – ಕಾಲು ಕಪ್
ಏಲಕ್ಕಿ ಪುಡಿ – 1 ಟೀಸ್ಪೂನ್
ಮಾಡುವ ವಿಧಾನ: * ಮೊದಲಿಗೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ಗೋಡಂಬಿ ಹಾಗೂ ಒಣ ದ್ರಾಕ್ಷಿಯನ್ನು ಹುರಿದುಕೊಳ್ಳಿ. ಗೋಡಂಬಿ, ದ್ರಾಕ್ಷಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಅದನ್ನು ಪಕ್ಕಕ್ಕಿರಿಸಿ.
* ಈಗ ಮಧ್ಯಮ ಉರಿಯಲ್ಲಿ ಒಣ ಕೊಬ್ಬರಿ ಹಾಗೂ ಅವಲಕ್ಕಿಯನ್ನು ಗರಿಗರಿಯಾಗಿ ಹುರಿದುಕೊಳ್ಳಿ. ಬಳಿಕ ಅದನ್ನು ಆರಲು ಪಕ್ಕಕ್ಕಿರಿಸಿ.
* ಈಗ ಮಿಕ್ಸರ್ ಜಾರ್ಗೆ ಸಕ್ಕರೆ ಹಾಕಿ ಪುಡಿ ಮಾಡಿಕೊಳ್ಳಿ. ಬಳಿಕ ಹುರಿದ ಅವಲಕ್ಕಿ ಹಾಗೂ ಒಣ ತೆಂಗಿನಕಾಯಿ ಮಿಶ್ರಣ ಸೇರಿಸಿ ಮತ್ತೆ ಪುಡಿ ಮಾಡಿಕೊಳ್ಳಿ.
* ಈಗ ಒಂದು ಕಡಾಯಿಯಲ್ಲಿ ಉಳಿದ ತುಪ್ಪ ಬಿಸಿ ಮಾಡಿ, ಪುಡಿ ಮಾಡಿದ ಮಿಶ್ರಣವನ್ನು ಹಾಕಿ, ಹುರಿದ ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿಯನ್ನು ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ. ಚೆನ್ನಾಗಿ ಮಿಶ್ರಣವಾದ ಬಳಿಕ ಉರಿಯನ್ನು ಆಫ್ ಮಾಡಿ.
* ಮಿಶ್ರಣ ಸ್ವಲ್ಪ ಬೆಚ್ಚಗಿರುವಾಗಲೇ ನಿಂಬೆ ಗಾತ್ರದ ಮಿಶ್ರಣ ಕೈಯಲ್ಲಿ ತೆಗೆದುಕೊಂಡು ಉಂಡೆಗಳನ್ನು ಕಟ್ಟಿಕೊಳ್ಳಿ.
* ಮಿಶ್ರಣ ಗಟ್ಟಿ ಎನಿಸಿದರೆ ಸ್ವಲ್ಪ ಹಾಲನ್ನು ಹಾಕಿ ಮಿಕ್ಸ್ ಮಾಡಿ ಉಂಡೆಗಳನ್ನು ಕಟ್ಟಿಕೊಳ್ಳಬಹುದು. (ಆದರೆ ಹಾಲು ಸೇರಿಸಿದರೆ ಹೆಚ್ಚು ದಿನ ಇರಿಸಿಕೊಳ್ಳಲು ಆಗುವುದಿಲ್ಲ)
* ಇದೀಗ ಅವಲಕ್ಕಿ ಲಾಡು ತಯಾರಾಗಿದ್ದು, ಅತಿಥಿಗಳಿಗೆ ನೀಡಿ. ನೀವಿದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟರೆ 15 ದಿನಗಳವರೆಗೆ ಕೆಡದಂತೆ ಇರಿಸಬಹುದು.