ರಸಮಲೈ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಹೆಸರು ಕೇಳಿದ್ರೇನೆ ಬಾಯಲ್ಲಿ ನೀರು ಬರುತ್ತೆ. ಅತ್ಯಂತ ರುಚಿಯಾದ ಈ ಸಿಹಿಯನ್ನು ನಿಮಗೂ ತಿನ್ನಬೇಕು ಎಂದೆನಿಸಿದರೆ ಈ ರೆಸಿಪಿ ನೋಡಿ. ರಸಮಲೈ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.
ಬೇಕಾಗುವ ಸಾಮಾಗ್ರಿಗಳು:
ಗಟ್ಟಿ ಹಾಲು- ಒಂದು ಲೀಟರ್ (ಅರ್ಧ ಲೀಟರ್ ಪನ್ನೀರಿಗೆ)
ವಿನೇಗರ್- 2 ಚಮಚ
ನೀರು-ಅಗತ್ಯಕ್ಕೆ ತಕ್ಕಂತೆ
ಸಕ್ಕರೆ-ಅರ್ಧ ಕಪ್ + ಕಾಲು ಕಪ್
ಏಲಕ್ಕಿ ಪುಡಿ- ಅರ್ಧ ಚಮಚ
ಮಾಡುವ ವಿಧಾನ:
* ಮೊದಲಿಗೆ ಗಟ್ಟಿ ಹಾಲಿನಿಂದ ಪನೀರ್ ಮಾಡಿಕೊಳ್ಳಬೇಕು. ಹಾಲನ್ನು ಬಿಸಿಯಾಗಲು ಇಟ್ಟು ಕುದಿ ಬಂದ ಮೇಲೆ ಅದಕ್ಕೆ 2 ಚಮಚ ವಿನೇಗರನ್ನು ಸೇರಿಸಬೇಕು. ವಿನೇಗರ್, ಹಾಲು ಬೇಗನೆ ಒಡೆಯಲು ಸಹಾಯ ಮಾಡುತ್ತದೆ (ಇದರ ಬದಲು ನಿಂಬೆ ಹಣ್ಣಿನ ರಸ ಕೂಡಾ ಉಪಯೋಗಿಸಬಹುದು). ಹಾಲು ಒಡೆದ ನಂತರ ಪನೀರ್ ಬೇರ್ಪಡಿಸಲು ಇದನ್ನು ಒಂದು ಬಟ್ಟೆಯ ಸಹಾಯದಿಂದ ನೀರಿನಂಶ ಇಲ್ಲದಂತೆ ಹಿಂಡಬೇಕು. ಹಿಂಡುವ ಮೊದಲು ವಿನೇಗರ್ ಪರಿಮಳ ಹೋಗುವ ಸಲುವಾಗಿ ಇದಕ್ಕೆ ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ. ಹಿಂಡಿದ ಮೇಲೆ ಅದನ್ನು ಬಟ್ಟೆಯಲ್ಲಿಯೇ ಗಂಟು ಕಟ್ಟಿ 15 ನಿಮಿಷಗಳ ಕಾಲ ಹಾಗೇ ಇಡಿ. ಇದನ್ನೂ ಓದಿ: ಮನೆಯಲ್ಲೇ ಮಾಡಿ ಸ್ಟ್ರಾಬೆರಿ ಓಟ್ಸ್ ಕುಲ್ಫಿ
* 15 ನಿಮಿಷಗಳ ಬಳಿಕ ಪನೀರನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ಚೆನ್ನಾಗಿ ನಾದಿಕೊಳ್ಳಬೇಕು. ನಂತರ ಇದನ್ನು ಉಂಡೆ ಮಾಡಿಕೊಂಡು ಬಿರುಕಾಗದಂತೆ ಅಂಗೈಯಲ್ಲಿ ದಪ್ಪಕ್ಕೆ ತಟ್ಟಿಕೊಳ್ಳಿ. ಅರ್ಧ ಲೀಟರ್ ಹಾಲಿನಿಂದ 8-9 ರಸಮಲೈ ಮಾಡಿಕೊಳ್ಳಬಹುದು. ನಂತರ ರಸಮಲೈ ಉಂಡೆಗಳನ್ನು ಬೇಯಿಸಿಕೊಳ್ಳಲು ಸಕ್ಕರೆ ಪಾಕವನ್ನು ರೆಡಿ ಮಾಡಿಕೊಳ್ಳಬೇಕು.
ಒಂದು ಬಾಣಾಲೆಯಲ್ಲಿ ಅರ್ಧ ಕಪ್ ಸಕ್ಕರೆಗೆ ಮೂರು ಕಪ್ ನೀರನ್ನು ಸೇರಿಸಿಕೊಳ್ಳಿ. ಸಕ್ಕರೆ ಕರಗಿ ಒಂದು ಕುದಿ ಬಂದರೆ ಸಾಕು. ಇದಕ್ಕೆ ನಾವು ಮಾಡಿಟ್ಟುಕೊಂಡಿದ್ದ ರಸಮಲೈಗಳನ್ನು ಹಾಕಿಕೊಳ್ಳಬೇಕು. ಗ್ಯಾಸ್ ಹೈ ಫ್ಲೇಮ್ನಲ್ಲಿ ಇಟ್ಟುಕೊಂಡು ಹಾಕಿಕೊಳ್ಳಿ. ಹಾಕಿಯಾದ ಮೇಲೆ ಮುಚ್ಚಳ ಮುಚ್ಚದೆ 3 ನಿಮಿಷಗಳವರೆಗೆ ಗ್ಯಾಸ್ ಹೈ ಫ್ಲೇಮ್ನಲ್ಲಿ ಇಟ್ಟುಕೊಂಡು ಬೇಯಿಸಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ 8-10 ನಿಮಿಷಗಳ ಕಾಲ ಅದನ್ನು ಕುದಿಸಿಕೊಳ್ಳಿ. ಬಳಿಕ ಅದನ್ನು ತಣ್ಣಗಾಗಲು ಬಿಡಿ.
* ಮತ್ತೆ ಅರ್ಧ ಲೀಟರ್ ಹಾಲನ್ನು ಒಂದು ಪಾತ್ರೆಗೆ ಹಾಕಿ ಕುದಿಸಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಕಲರ್ ಪೌಡರನ್ನು ಹಾಕಿಕೊಳ್ಳಬೇಕು. ಬಳಿಕ ಇದಕ್ಕೆ ಕಾಲು ಕಪ್ ಸಕ್ಕರೆಯನ್ನು ಸೇರಿಸಿಕೊಳ್ಳಿ. ಸಕ್ಕರೆ ಕರಗಿದ ನಂತರ ಅರ್ಧ ಚಮಚ ಏಲಕ್ಕಿ ಪುಡಿಯನ್ನು ಹಾಕಿಕೊಳ್ಳಿ. ಗ್ಯಾಸ್ ಆಫ್ ಮಾಡಿ. ಇದನ್ನೂ ಓದಿ: ಬೇಕರಿಯಲ್ಲಿ ಸಿಗುವ ಡೋನಟ್ ಮನೆಯಲ್ಲೂ ಮಾಡ್ಬೋದು ತುಂಬಾ ಸುಲಭವಾಗಿ
* ರಸಮಲೈ ಮಾಡಲು ಈ ಹಾಲು ಬಿಸಿಯಾಗಿರಬೇಕು. ಆದರೆ ಸಕ್ಕರೆ ಪಾಕದಲ್ಲಿದ್ದ ರಸಮಲೈಗಳು ಸಂಪೂರ್ಣ ತಣ್ಣಗಾಗಿರಬೇಕು. ಸಕ್ಕರೆ ಪಾಕದಲ್ಲಿದ್ದ ರಸಮಲೈಯನ್ನು ಸ್ವಲ್ಪ ಹಿಂಡಿ ಬಿಸಿಯಾಗಿರುವ ಹಾಲಿಗೆ ಹಾಕಿಕೊಳ್ಳಿ. ನಂತರ ಹಾಲನ್ನು ತಣ್ಣಗಾಗಲು ಬಿಡಬೇಕು. ಪನೀರ್ ಉಂಡೆಗಳು ಹಾಲನ್ನು ಚೆನ್ನಾಗಿ ಹೀರಿಕೊಳ್ಳಬೇಕು. ರಸಮಲೈಯನ್ನು ಸರ್ವ್ ಮಾಡುವ ಮೊದಲು ಅದಕ್ಕೆ ಸ್ವಲ್ಪ ಡ್ರೈಫ್ರುಟ್ಸ್ ಹಾಕಿಕೊಂಡರೆ ಉತ್ತಮ ರುಚಿಯನ್ನು ನೀಡುತ್ತದೆ.