ವರದಿ: ಹನೂರು ರವಿ
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೋಟಿ ಕೋಟಿ ಆದಾಯ ಬರುತ್ತಿದ್ದರು ಎಲ್ಲಂದರೆ ಅವ್ಯವಸ್ಥೆಯ ಮೂಲಭೂತ ಸೌಕರ್ಯ ತಾಂಡವವಾಡುತ್ತಿದ್ದು ಲಕ್ಷಾಂತರ ಭಕ್ತರಿಗೆ ಬೇಕಾದ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ದುರಾಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ತಾಲೂಕಿನ ಸುಪ್ರಸಿದ್ಧ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಎರಡೇ ವರ್ಷಕ್ಕೆ ದೇವಸ್ಥಾನಕ್ಕೆ ಹರಿದು ಬಂದ ಆದಾಯ ಕನಿಷ್ಠ ಬರೋಬ್ಬರಿ 200 ಕೋಟಿ ಆದರೂ ಕೋಟಿ ಕೋಟಿ ಆದಾಯ ಬಂದ್ರು ಗಬ್ಬೆದ್ದು ನಾರುತ್ತಿರುವ ದೇವಸ್ಥಾನದ ಆವರಣ ಸುತ್ತ ಮುತ್ತಲಿನ ಪರಿಸರದ ವ್ಯವಸ್ಥೆ.
ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಶೌಚಾಲಯದ ವ್ಯವಸ್ಥೆ ಸರಿ ಇಲ್ಲದೆ ಇರುವ ಶೌಚಾಲಯಗಳ ನಿರ್ವಹಣೆಯು ಬೇಜವಾಬ್ದಾರಿತನದಿಂದ ಶೌಚಾಲಯಗಳು ಗಬ್ಬೆದ್ದು ಹೋಗಿದೆ. ಸ್ನಾನದ ಕೋಣೆಗಳು ಕೊಳಕಿನಿಂದ ಕೂಡಿದ್ದು ದುರ್ವಾಸನೆ ಬೀರುತ್ತಿದೆ. ವ್ಯವಸ್ಥೆ ಸರಿಯಿಲ್ಲದೆ ಭಕ್ತಾದಿಗಳು ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ಮಲಮೂತ್ರ ವಿಸರ್ಜನೆ ಮಾಡಿ ಪರಿಸರವನ್ನು ಹಾಳು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಲಾಡ್ಜ್ಗಳ ನಿರ್ಮಾಣಕ್ಕೆ ಎಕರೆಗಟ್ಟಲೆ ಜಾಗವಿದೆ. ಆದರೆ ಸಾವಿರಾರು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡುವ ಜಾಗ ಮಾತ್ರ ಓಬಿರಾಯನ ಕಾಲದಿಂದಲೂ ಅಷ್ಟೇ ಇದೆ. ಅದರಲ್ಲೂ ಎಲ್ಲೆಂದರಲ್ಲಿ ಮುರಿದು ಹೋಗಿರುವ ಟೇಬಲ್ ಕುರ್ಚಿಗಳನ್ನು ಅಲ್ಲಲ್ಲೇ ತೇಪೆ ಹಾಕಿ ಸರಿ ಮಾಡಿರುವುದು ಕಂಡುಬರುತ್ತದೆ ಇದರಲ್ಲೂ ನಿರ್ವಹಣೆಯ ಕೊರತೆಯಿಂದ ಭಕ್ತಾದಿಗಳಿಗೆ ಅನಾನುಕೂಲವೇ ಹೆಚ್ಚಾಗಿದೆ.
ಮಾದೇಶ್ವರ ಸ್ವಾಮಿಯ ದರ್ಶನಕ್ಕೆ ಹರಕೆ ಹೊತ್ತು ಬರುವ ಭಕ್ತರು ಸಾಮಾನ್ಯ ದರ್ಶನಕ್ಕೆ ಹಾವಿನ ರೀತಿ ಸುತ್ತು ಬಳಸಿಕೊಂಡು ಹೋಗಬೇಕೆಂಬುದೇ ದುರಂತ. ವಿಶೇಷ ಜಾತ್ರೆ ಹಬ್ಬ ಹರಿ ದಿನಗಳಲ್ಲಿ ದೇವರ ದರ್ಶನಕ್ಕೆ ಸಾರಥಿ ಸಾಲಿನಲ್ಲಿ ಒಂದು ಬಾರಿ ನಿಂತರೆ ಬೆಳಗ್ಗೆಯಿಂದ ಸಂಜೆಯವರೆಗೂ ಸಾರತಿ ಸಾಲಿನಲ್ಲಿ ಹೋಗಬೇಕಾದ ಪರಿಸ್ಥಿತಿ ಇದೆ. ಇಷ್ಟಿದ್ದರೂ ಸರಿಯಾದ ದೇವರ ದರ್ಶನ ಸಿಗದೇ ತರಾತುರಿಯಲ್ಲಿ ಹೊರಗೆ ಹೋಗುವುದು ಭಕ್ತರ ನಿರಾಶೆಗೆ ಕಾರಣವಾಗಿದೆ.
ದೇವಸ್ಥಾನದ ಸುತ್ತಲೂ ಬರಿಗಾಲಲ್ಲಿ ನಡೆಯುವ ಭಕ್ತಾಧಿಗಳಿಗೆ ಕನಿಷ್ಠ ಮ್ಯಾಟ್ ವ್ಯವಸ್ಥೆ ಮಾಡಲು ಸಾಧ್ಯವಾಗದ ಹೊಣೆಗೇಡಿ ಆಡಳಿತ ಮಂಡಳಿಯ ವಿರುದ್ಧ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಸುತ್ತ ಪ್ರದಕ್ಷಣೆ ಹಾಕಲು ಉರುಳು ಸೇವೆ ಮಾಡಲು ಭಕ್ತರು ಮೂರೂ ನಾಲ್ಕು ಬಾರಿ ಬಳಸುತ್ತಾರೆ. ಈ ಬಿಸಿಲಿನ ಕಾಲದಲ್ಲಂತೂ ನೆಲ ಕಾದು ನಡೆಯುವುದಕ್ಕೂ ಕಷ್ಟವಾಗಿರುತ್ತದೆ. ಕೋಟಿ ಆದಾಯ ಬಂದರು ಭಕ್ತರ ಸುರಕ್ಷತೆಯ ದೃಷ್ಟಿಯಿಂದ ನೆಲಹಾಸು (ಮ್ಯಾಟ್) ಹಾಕುವ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ಪ್ರಾಧಿಕಾರ ಮುಂದಾ ಆಗದಿರುವುದು ದುರಂತವೇ ಸರಿ.
ಭಕ್ತಾಧಿಗಳು ತಂಗುವ ರಂಗ ಮಂದಿರ ಸಾರ್ವಜನಿಕ ಹಾಲ್ನಲ್ಲಿ ಬರೀ ದನಗಳ ಸಗಣಿಯೇ ತುಂಬಿದೆ. ಬೆಳಗ್ಗೆಯಿಂದ ಸಂಜೆವರೆಗೂ ದನಗಳ ಓಡಾಟ. ಸಂಜೆಯಾಗುತ್ತಿದ್ದಂತೆ ನೇರವಾಗಿ ಒಳಾಂಗಣಕ್ಕೆ ಬರುವ ಹಂದಿಗಳ ಕಾಟದಿಂದ ಭಕ್ತರು ನೆಮ್ಮದಿಯಿಂದ ಕೂರಲು ಆಗುತ್ತಿಲ್ಲ. ಸಗಣಿ ಕೊಳಚೆ ನೀರು ಗಬ್ಬೆದ್ದು ನಾರುವ ಪರಿಸರದಿಂದ ಬೇಸತ್ತ ಭಕ್ತರು ಆಡಳಿತ ವ್ಯವಸ್ಥೆಗೆ ಶಾಪ ಹಾಕುತ್ತಿದ್ದಾರೆ.
ದೇವರಿಗೆ ಮುಡಿ ಕೊಡಲು ಹೋದರೆ ಅಲ್ಲೂ ಹಣಕ್ಕಾಗಿ ಪೀಡನೆ. ಹಣ ಕೊಡದಿದ್ದರೆ ಬೇಕಾಬಿಟ್ಟಿ ಕತ್ತಿ ಎಳೆಯೋದು…. ಬೇಕಾಬಿಟ್ಟಿ ತಲೆ ಬೋಳಿಸೋದು…. ಟಿಕೇಟ್ಗಷ್ಟೇ ದುಡ್ಡು ಕೊಟ್ಟರೆ ಸಾಲದು ಅಲ್ಲಿ ಮುಡಿ ಮಾಡುವವನಿಗೆ 50 ರೂ 100 ರೂ ಕೊಡ ಬೇಕು ಇಲ್ಲಾಂದ್ರೆ ನಿಮ್ಮ ತಲೆ ನಿಮ್ಮದಲ್ಲ ಅಷ್ಟೆ. ಭಯದ ಪರಿಸ್ಥಿತಿಯಲ್ಲಿ ಭಕ್ತರು ಹಲವಾರು ಸಮಸ್ಯೆಗಳನ್ನು ಹೆದರಿಸುತ್ತಿದ್ದಾರೆ.
ಕೋಟಿಗಟ್ಟಲೆ ಬರುವ ಆದಾಯದಲ್ಲಿ ಪವಿತ್ರ ಕ್ಷೇತ್ರವೊಂದರಲ್ಲಿ ಕನಿಷ್ಠ ಸ್ವಚ್ಛತೆಯು ಇಲ್ಲ. ಶಿಸ್ತು ಬದ್ಧವಾದ ನಿರ್ವಹಣೆ ಇಲ್ಲ. ಶುಚಿ-ರುಚಿಯಾದ ಪ್ರಸಾದ ವಿತರಣೆ ಮಾಡಲಾಗದಿದ್ದ ಮೇಲೆ ಇನ್ನು ಏನು ಉದ್ಧಾರ ಮಾಡಲು ಸಾಧ್ಯ ಎಂಬ ಪ್ರಶ್ನೆಗಳು ಮೂಡುತ್ತವೆ.
ಪ್ರತಿ ವರ್ಷ ಸಾವಿರಾರು ಜನ ಭಕ್ತಾಧಿಗಳು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೋಗ್ತಾರೆ. ನೂರಾರು ಕೋಟಿ ಬಂದರು ಕೂಡ ಇದುವರೆವಿಗೂ ದಾರಿ ಮಧ್ಯೆದಲ್ಲಿ ತಂಗಲು ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ… ದಾರಿ ಮಧ್ಯೆದಲ್ಲಿ ಪ್ರತಿಯೊಂದು ಪಾದಯಾತ್ರೆ ತಂಡವೂ ತಂಗುವ ತಂಗುದಾಣ ತಾಳು ಬೆಟ್ಟದಲ್ಲಿ ಇದುವರೆವಿಗೂ ಯಾತ್ರಿಗಳಿಗೊಂದು ಸುಸಜ್ಜಿತವಾದ ವಿಶ್ರಾಂತಿ ತಾಣ. ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಗದಿರುವುದು ದುರಂತವೇ ಸರಿ.
ಮಹದೇಶ್ವರ ಬೆಟ್ಟದ ಆಕರ್ಷಕ ಕೇಂದ್ರ ಬಿಂದುವಾಗಿರುವಂತಹ ಶ್ರೀ ಮಲೆ ಮಹದೇಶ್ವರರು ಹುಲಿಯ ಮೇಲೆ ಕುಳಿತಿರುವ ಭಂಗಿಯಲ್ಲಿನ 108 ಅಡಿ ಎತ್ತರದ ಪ್ರತಿಮೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಬಸವರಾಜ್ ಬೊಮ್ಮಾಯಿ ಅವರು ತರಾತುರಿಯಲ್ಲಿ ಉದ್ಘಾಟನೆ ಮಾಡಿರುವುದು ದುರಂತವೇ ಸರಿ.
ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡಿನಲ್ಲಿ ನಿರ್ಮಾಣ ಮಾಡಲಾಗಿರುವ ಬೃಹತ್ ಮಹದೇಶ್ವರ 108 ಅಡಿ ಪ್ರತಿಮೆ ಕಾಮಗಾರಿಯು ಅಭಿವೃದ್ಧಿ ಕೆಲಸಗಳು ಇನ್ನೂ ಮುಗಿಯದೆ ಅರೆಬರೆ ಮಾಡಲಾಗಿದೆ. ಭಕ್ತಾಧಿಗಳಿಗೆ ವೀಕ್ಷಣೆಗೆ ಅನುಕೂಲವಾಗುವಂತೆ ಕಾಮಗಾರಿಯೇ ಮುಗಿಯದ ಬೃಹತ್ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.
ವಾಹನ ಪಾರ್ಕಿಂಗ್ಗೆ ಸರಿಯಾದ ವ್ಯವಸ್ಥೆ ಮಾಡಲಾಗದಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದಾರೋ? ಪ್ರತಿಮೆಯನ್ನು ನೋಡಲು ದಿನನಿತ್ಯ ಆಗಮಿಸುವಂಥ ಭಕ್ತರು ಹತ್ತಿರಕ್ಕೂ ಹೋಗಲಾಗದೆ ಬಂದ್ ಮಾಡಲಾಗಿದ್ದು. ಅಪೂರ್ಣ ಕಾಮಗಾರಿಯ ದುರಾವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಮಹದೇಶ್ವರ ಬೆಟ್ಟದಲ್ಲಿ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಸಿಗದ ಅಭಿವೃದ್ಧಿ ವ್ಯವಸ್ಥೆ. ಮುಡಿ ತೆಗೆಯಲು ಪಡೆಯುವ ಅಧಿಕ ಹಣ ವಸೂಲಿ, ಸ್ವಚ್ಚತೆ ಇಲ್ಲದ ಅಂತರ ಗಂಗೆ , ಸ್ನಾನದ ಕೊಠಡಿಗಳು, ಶೌಚಾಲಯ ದುರಾವಸ್ಧೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಲು ಶ್ರೀ ಕ್ಷೇತ್ರ ಮಲೈ ಮಹಾದೇಶ್ವರ ಅಭಿವೃದ್ಧಿ ಪ್ರಾಧಿಕಾರ ಆಡಳಿತ ಮಂಡಳಿ ಯಾವ ರೀತಿ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಕಾದು ನೋಡ ಬೇಕಿದೆ.