ಚಾಮರಾಜನಗರವನ್ನು ಮಾದರಿ ಜಿಲ್ಲೆ ಮಾಡುವುದೇ ಗುರಿ
ಚಾಮರಾಜನಗರ: ‘ನಾನು ಯಾವ ಕ್ಷೇತ್ರದಿಂದಲೂ ಟಿಕೆಟ್ ಕೇಳಿಲ್ಲ. ವರಿಷ್ಠರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ ಒಂದಂತು ಸತ್ಯ. ಸೋಮಣ್ಣ ಅಭಿವೃದ್ಧಿ ಪರ. ಸೋಮಣ್ಣ ಇದ್ದರೆ ಅಭಿವೃದ್ಧಿಯಾಗುತ್ತದೆ’ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಮಂಗಳವಾರ ಹೇಳಿದರು.
‘ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸುತ್ತೀರಿ, ಚಾಮರಾಜನಗರ ಟಿಕೆಟ್ ಖಚಿತವಾಯಿತೇ’ ಎಂದು ಮಾಧ್ಯಮಗಳ ಪ್ರಶ್ನೆಗೆ, ‘ಅದನ್ನು ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. 224 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವೆ. ಇದೇ ಕ್ಷೇತ್ರ ಬೇಕು ಎಂದು ಕೇಳಿಲ್ಲ. ಸ್ವಲ್ಪ ಕಾಯಿರಿ. ಇನ್ನು ಎರಡು ಗಂಟೆಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಆಗ ಗೊತ್ತಾಗುತ್ತದೆ’ ಎಂದು ಹೇಳಿದರು.
ಮಾದರಿ ಜಿಲ್ಲೆಯೇ ಗುರಿ: ಬಿಜೆಪಿ ರೈತ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಸೋಮಣ್ಣ, ‘ಚಾಮರಾಜನಗರ ಅಭಿವೃದ್ಧಿಯಲ್ಲಿ ಹಿಂದುಳಿದಿರಬಹುದು. ಆದರೆ ಸ್ವಾಭಿಮಾನ, ಸಂಸ್ಕಾರದಲ್ಲಿ ಹಿಂದೆ ಬಿದ್ದಿಲ್ಲ. ಮಹದೇಶ್ವರ ಸ್ವಾಮಿ ಆಶೀರ್ವಾದ ಪಡೆದುಕೊಂಡು ಈ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವುದೇ ನನ್ನ ಗುರಿ’ ಎಂದರು.
ಖಚಿತವಾಯಿತೇ ಟಿಕೆಟ್?:
ಸಚಿವ ಸೋಮಣ್ಣ ದಿಢೀರ್ ಆಗಿ ಮಂಗಳವಾರ ಚಾಮರಾಜನಗರಕ್ಕೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದ್ದು, ಚಾಮರಾಜನಗರ ಕ್ಷೇತ್ರದಿಂದ ಅವರಿಗೆ ಟಿಕೆಟ್ ಖಚಿತವಾಗಿದೆ ಎಂಬ ಚರ್ಚೆ ನಡೆಯುತ್ತಿದೆ.
ರೈತ ಸಮಾವೇಶದಲ್ಲಿ ಸೋಮಣ್ಣ ಭಾಗಿಯಾಗುವುದು ನಿಗದಿಯಾಗಿರಲಿಲ್ಲ. ಸೋಮವಾರ ಮಧ್ಯಾಹ್ನ ಅವರ ಪ್ರವಾಸ ವೇಳಾಪಟ್ಟಿ ಬರುತ್ತಿದ್ದಂತೆಯೇ ಬಿರುಸಿನ ಚರ್ಚೆ ಆರಂಭವಾಗಿದೆ.
‘ವರಿಷ್ಠರು ಚಾಮರಾಜನಗರದ ಟಿಕೆಟ್ ಖಚಿತ ಪಡಿಸಿದ ನಂತರ ಸೋಮಣ್ಣ ಜಿಲ್ಲೆಗೆ ಬಂದಿದ್ದಾರೆ’ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಸೋಮಣ್ಣ ಅವರು ಮಹದೇಶ್ವರ ಬೆಟ್ಟಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಲಿರುವುದು ವದಂತಿಗೆ ಇನ್ನಷ್ಟು ಪುಷ್ಟಿ ನೀಡಿದೆ