ಮೈಸೂರು: ವರುಣಾ ಕ್ಷೇತ್ರಕ್ಕೆ ತಾಲೂಕು ಕೇಂದ್ರವಿಲ್ಲದೆ ಅಲ್ಲಿನ ಜನ ಅಬ್ಬೆಪಾರಿಗಳಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರದ ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ಯಾವ ಸ್ಥಳಕ್ಕೆ ಹೋಗಬೇಕೆಂಬ ಗೊಂದಲ 15 ವರ್ಷದಿಂದಲೂ ಇದೆ. ಸಿದ್ದರಾಮಯ್ಯನವರ ಕೈಯಲ್ಲಿ ಒಂದು ತಾಲೂಕು ಕೇಂದ್ರ ಮಾಡಲು ಆಗಲಿಲ್ಲ. ಮುಖ್ಯಮಂತ್ರಿಯಾಗಿಯೂ ಸಿದ್ದರಾಮಯ್ಯನವರು ವರುಣಾ ಅಭಿವೃದ್ಧಿ ಮಾಡಲಿಲ್ಲ. ವರುಣಾ ತಾಲೂಕು ಕೇಂದ್ರವಾಗಬೇಕಿದೆ. ಒಂದೇ ಸರ್ಕಾರಿ ಕಚೇರಿಯಲ್ಲಿ ವರುಣಾ ಜನರ ಕೆಲಸವಾಗಬೇಕು. ಸೋಮಣ್ಣನ ಗೆಲ್ಲಿಸಿ ವರುಣಾ ಕ್ಷೇತ್ರವನ್ನು ತಾಲೂಕು ಕೇಂದ್ರ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ 2018 ಕೊನೆ ಚುನಾವಣೆ ಎಂದು ಹೇಳಿದ್ದರು. ಕೊನೆ ಚುನಾವಣೆಯಲ್ಲೇ ಚಾಮುಂಡೇಶ್ವರಿ ಕ್ಷೇತ್ರದ ಜನ ಅವರನ್ನು ಮುಗಿಸಿದರು. ಈ ಬಾರಿಯೂ ಅದೇ ಪ್ಲೇಟ್ ಅನ್ನು ಸಿದ್ದರಾಮಯ್ಯ ಹಾಕುತ್ತಿದ್ದಾರೆ. ಇಲ್ಲಿಯ ಜನರು ಕೂಡ ಅವರ ರಾಜಕೀಯ ಜೀವನವನ್ನು ಮುಗಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಚಾಮುಂಡಿ ಆಶೀರ್ವಾದ ಮಾಡುವುದು ಆಕೆಯ ಭಕ್ತರಿಗೆ ಮಾತ್ರ. ಸಿದ್ದರಾಮಯ್ಯ ಪತ್ನಿ, ಚಾಮುಂಡಿ ತಾಯಿ ಭಕ್ತೆ ಇರಬಹುದು. ಆದರೆ ಅವರ ಪತ್ನಿ ಚುನಾವಣೆಗೆ ಸ್ಪರ್ಧಿಸಿಲ್ಲವಲ್ಲ ಎಂದ ಅವರು, ಮೈಸೂರು ಭಾಗಕ್ಕೆ ನಾಯಕತ್ವದ ದೊಡ್ಡ ಕೊರತೆ ಇತ್ತು. ತುರ್ತಾಗಿ ತ್ವರಿತವಾಗಿ ಒಬ್ಬ ನಾಯಕನ ಅವಶ್ಯಕತೆ ಇತ್ತು. ಸೋಮಣ್ಣ ಆ ಕೊರತೆಯನ್ನು ನೀಗಿಸುತ್ತಾರೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಸಂಘಟನೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.