ಮೈಸೂರು: ರಾಜ್ಯ ರಾಜಕಾರಣದಲ್ಲಿ ಅತಿಹೆಚ್ಚು ಸುದ್ದಿಯಲ್ಲಿರುವ ಕ್ಷೇತ್ರಗಳಲ್ಲಿ ಒಂದಾಗಿರುವ ಹಾಸನ ಕ್ಷೇತ್ರದ ತೆನೆ ನಡೆಯಲ್ಲಿ ಬದಲಾವಣೆಯಾಗಿದ್ದು, ಮೈಸೂರಿನತ್ತ ದೊಡ್ಡಗೌಡರ ಸೊಸೆ ಮುಂದಾಗಿದ್ದು, ಇಂತಹದೊಂದು ಸವಾಲು ಅವರ ಸ್ವೀಕರಿಸಿದರೆ ಈ ಬಾರಿ ಚುನಾವಣೆ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿದೆ.
ಜಾತ್ಯಾತೀತ ಜನತಾದಳ ಭದ್ರಕೋಟೆಯಾಗಿರುವ ಹಾಸನ ಜಿಲ್ಲೆಯಲ್ಲಿನ ಹಾಸನ ಕ್ಷೇತ್ರ ಜೆಡಿಎಸ್ ಟಿಕೇಟ್ನ ಪೈಪೋಟಿ ಈಗ ದೇವೇಗೌಡರ ಹಂತ ತಲುಪಿದೆ. ಈ ವೇಳೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ನಡುವಿನ ಮುಸುಕಿನ ಗುದ್ಧಾಟ ಶಮನಕ್ಕೆ ಇನ್ನಿಲ್ಲದ ಶತ ಪ್ರಯತ್ನಗಳೇ ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಹಾಸನ ಕ್ಷೇತ್ರದ ಟಿಕೇಟ್ ಗೊಂದಲಕ್ಕೆ ತೆರೆ ಎಳೆಯುವ ಜತೆಗೆ ಹೊಸದೊಂದು ಸವಾಲು ಎದುರಿಸುವ ಟಾಸ್ಕ್ ಅನ್ನು ರೇವಣ್ಣ ಕುಟುಂಬ ಸ್ವೀಕರಿಸಿದ್ದಾರೆ.
ಬಹುಮುಖ್ಯವಾಗಿ ಹಳೆ ಮೈಸೂರು ದೇವೇಗೌಡರ ಪ್ರಬಾಲ್ಯ ಹೆಚ್ಚಿರುವ ಜಿಲ್ಲೆಗಳಿದ್ದರೂ ಸಹ ಇದುವರೆವಿಗೂ ದೇವೇಗೌಡರ ಆದಿಯಾಗಿ ಯಾರೊಬ್ಬರೂ ಜಿಲ್ಲಾ ರಾಜಕಾರಣಕ್ಕಿಳಿದು ಸ್ಪರ್ಧಿಗಳಾಗಿರಲಿಲ್ಲ. ಕಳೆದ ಸಂಸದರ ಚುನಾವಣೆಯಲ್ಲಿ ದೇವೇಗೌಡರ ಸ್ಪರ್ಧೆಗೆ ಒತ್ತಾಯ ಬಂದಿದ್ದರೂ ಸಾಧ್ಯವಾಗಿರಲಿಲ್ಲ. ಇನ್ನೂ ಕಳೆದ ಬಾರಿ ಭವಾನಿ ರೇವಣ್ಣ ಕೆ.ಆರ್.ನಗರದಿಂದ ಸ್ಪರ್ಧಿಸುತ್ತಾರೆಂಬ ಗಾಳಿ ಸುದ್ದಿ ಇತ್ತಾದರೂ ಸ್ಪರ್ಧೆ ಆಗಿರಲಿಲ್ಲ. ಇನ್ನೂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಹೇರುತ್ತಿದ್ದರಾದರೂ ಇದುವರೆವಿಗೂ ಅಂತಹ ಸವಾಲು ಯಾರು ಸ್ವೀಕರಿಸಿರಲಿಲ್ಲ. ಹೀಗಾಗಿ ಸದ್ಯ ಈ ಬಾರಿ ಅಂತ ಪ್ರಯತ್ನ ನಡೆದು ಮೈಸೂರು ರಾಜಕಾರಣಕ್ಕೆ ದೊಡ್ಡಗೌಡರ ಸೊಸೆ ಬರುತ್ತಾರೆಯೇ ಎಂಬುದು ಕದನ ಕೂತೂಹಲಕ್ಕೆ ಕಾರಣವಾಗಿದೆ.
ಚಾಮರಾಜ ಸುಲಭವಲ್ಲ: ಭವಾನಿ ರೇವಣ್ಣ ಅವರು ಮೂಲತಃ ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದವರಾಗಿದ್ದರೂ ನಗರ ಭಾಗಕ್ಕೆ ಹೊಂದಿಕೊಂಡಂತಿರುವ ಚಾಮರಾಜ ಸುಶಿಕ್ಷಿತರ ಕ್ಷೇತ್ರ ಎಂದೆ ಹೆಸರಾಗಿದೆ. ಹೀಗಿರುವಾಗ ಅಂತಹ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಆಗಲಿ ಅಥವಾ ಗೆಲುವಾಗಲಿ ಸುಲಭದ ಮಾತಲ್ಲ. ಇನ್ನೂ ಭವಾನಿ ರೇವಣ್ಣ ಸ್ಪರ್ಧೆ ಸಂಬಂಧ ಸ್ಥಳೀಯ ಆಕಾಂಕ್ಷಿಗಳಾಗಿರುವ ನಗರಪಾಲಿಕೆ ಸದಸ್ಯರಾದ ಕೆ.ವಿ.ಶ್ರೀಧರ್, ಎಸ್ಬಿಎಂ ಮಂಜು, ಭಾಗ್ಯ ಮಾದೇಶ್ ಸೇರಿ ಅನೇಕರಿಗೆ ಮಾಹಿತಿಯೇ ಇಲ್ಲ. ಹೀಗಾಗಿ ಚಾಮರಾಜದಲ್ಲಿ ಭವಾನಿ ರೇವಣ್ಣ ಗೆಲುವು ಸುಲಭವಂತೂ ಅಲ್ಲ ಎಂಬ ಅರಿವು ರೇವಣ್ಣ ಕುಟುಂಬಕ್ಕೆ ಇರುವ ಹಿನ್ನಲೆಯಲ್ಲಿ ಸ್ಪರ್ಧೆಗೆ ಮತ್ತಷ್ಟು ಚಿಂತನೆ ನಡೆಸುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ನಾಳೆ ಬಿಡುಗಡೆಯಾಗುವ ಪಟ್ಟಿಯಲ್ಲಿ ಚಾಮರಾಜ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮುಂದೂಡುವ ಸಾಧ್ಯತೆ ಎನ್ನಲಾಗುತ್ತಿದೆ
ಇನ್ನೂ 1978ರಿಂದ ಇಲ್ಲಿಯವರೆಗೆ ಕ್ಷೇತ್ರದಲ್ಲಿ ಒಟ್ಟು 11 ಚುನಾವಣೆಗಳು ನಡೆದಿದ್ದು, 8 ಶಾಸಕರು ಆರಿಸಿ ಬಂದಿದ್ದಾರೆ. ಈ ಪೈಕಿ ಶಂಕರಲಿಂಗೇಗೌಡ ಸತತ 4 ಬಾರಿ ಆಯ್ಕೆಯಾಗಿ ದಾಖಲೆ ಬರೆದರೂ ಸಹ ಕ್ಷೇತ್ರಕ್ಕೆ ಮಂತ್ರಿಗಿರಿ ದೊರಕದಿರುವುದು ಕ್ಷೇತ್ರ ವಿಶೇಷ. ಒಕ್ಕಲಿಗರ ಪ್ರಾಬಾಲ್ಯ ಹೆಚಿದ್ದರೆ ಬ್ರಾಹ್ಮಣ, ಲಿಂಗಾಯತ, ಗೊಲ್ಲ ಸೇರಿ ಅನೇಕ ಹಿಂದುಳಿದ ಸಮುದಾಯದವರು ಕ್ಷೇತ್ರದಲ್ಲಿದ್ದಾರೆ. ೧೩ಕ್ಕೂ ಹೆಚ್ಚು ಸ್ಲಂಗಳಲ್ಲೇ ಅತಿ ಹೆಚ್ಚು ಮತದಾರಿದ್ದು, ಬಹು ಮಹಡಿ ಅಪಾರ್ಟ್ಮೆಂಟ್ನ ಮತದಾರರ ಮತದಾನ ಕಡಿಮೆ ಇರುವುದರಿಂದ ಸ್ಲಂಗಳತ್ತ ನಾಯಕರ ಚಿತ್ತ ಹರಿದಿದೆ. ಇನ್ನೂ 1,23,030 ಅತಿಹೆಚ್ಚು ಮಹಿಳಾ ಮತದಾರರಿದ್ದರೆ, 1,19701 ಪುರುಷ ಮತದಾರರು ಸೇರಿ ಕ್ಷೇತ್ರದಲ್ಲಿ ಒಟ್ಟು 2,42,760 ಮತದಾರರಿದ್ದಾರೆ. 1978ರಿಂದ ಈವರೆಗೆ ಒಂಭತ್ತ ಶಾಸಕರನ್ನು ಕಂಡ ಕ್ಷೇತ್ರದಲ್ಲಿ 12 ಚುನಾವಣೆಗಳಾಗಿವೆ. ಈ ಪೈಕಿ ಶಾಸಕ ಶಂಕರಲಿಂಗೇಗೌಡ ನಾಲ್ಕು ಬಾರಿ ಗೆದ್ದು ಕ್ಷೇತ್ರದಲ್ಲಿ ಪಾಬಾಲ್ಯ ತೋರಿದ್ದಾರೆ. 11 ಚುನಾವಣೆಗಳಲ್ಲಿ ಮೂರು ಬಾರಿ ಕಾಂಗ್ರೆಸ್, ಮೂರು ಬಾರಿ ಜೆಡಿಎಸ್ ಹಾಗೂ 5 ಬಾರಿ ಬಿಜೆಪಿ ಗೆಲುವು ಸಾಧಿಸಿ ಬಿಜೆಪಿ ಪಾಬಾಲ್ಯವುಳ್ಳ ಕ್ಷೇತ್ರ ಎಂದೆನಿಸಿಕೊಂಡಿದೆ. ಹೀಗಿರುವಾಗ ಭವಾನಿ ರೇವಣ್ಣ ಸ್ಪರ್ಧಿಸಿದರೆ ಕ್ಷೇತ್ರ ರಣರಂಗ ಆಗುವುದು ನಿಶ್ಚಿತವಾಗಿದೆ. ಆದರೆ, ಅವರ ಸ್ಪರ್ಧೆಯ ಕೂತೂಹಲಕ್ಕೆ ನಾಳೆಯ ಪಟ್ಟಿ ತೆರೆ ಎಳೆಯುವುದೇ ಕಾದು ನೋಡಬೇಕಿದೆ.