ಬೆಂಗಳೂರು: ವಿರಾಟ್ ಕೊಹ್ಲಿ ಅರ್ಧ ಶತಕದ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಬೌಲಿಂಗ್ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್ ಭರ್ಜರಿ ಜಯ ಸಾಧಿಸಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ 2023ರ ಐಪಿಎಲ್ನಲ್ಲಿ ಸತತ 5ನೇ ಸೋಲು ಎದುರಿಸಿ ತೀವ್ರ ಮುಖಭಂಗ ಅನುಭವಿಸಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಕೆಟ್ ಕಳೆದುಕೊಂಡ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಉತ್ತಮ ರನ್ ಕಲೆಹಾಕಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. 175 ರನ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್ಗಳಿಸಿ ಸತತ 5ನೇ ಸೋಲು ಕಂಡಿತು.
ಚೇಸಿಂಗ್ ಆರಂಭಿಸುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್ಮ್ಯಾನ್ಗಳು ಆರ್ಸಿಬಿ ಬೌಲರ್ಗಳ ದಾಳಿಗೆ ತರಗೆಲೆಗಳಂತೆ ಉದುರಿದರು. ಪೃಥ್ವಿ ಶಾ, ಮಿಚೆಲ್ ಮಾರ್ಷ್ ಶೂನ್ಯಕ್ಕೆ ಔಟಾದರೆ, ಯಶ್ ಧುಲ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ಡೇವಿಡ್ ವಾರ್ನರ್ ಸಹ 13 ಎಸೆತಗಳಲ್ಲಿ 19 ರನ್ ಗಳಿಸಿ ಸಿಂಪಲ್ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಇದರಿಂದ ತಂಡ ಸೋಲುವುದು ಬಹುತೇಕ ಖಚಿತವಾಯಿತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮನಿಷ್ ಪಾಂಡೆ 38 ಎಸೆತಗಳಲ್ಲಿ 50 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.
ನಂತರ ಕಣಕ್ಕಿಳಿದ ಅಕ್ಷರ್ ಪಟೇಲ್ 21 ರನ್, ಅಮನ್ ಹಕೀಮ್ ಖಾನ್ 18 ರನ್ ಹಾಗೂ ಅಭಿಷೇಕ್ ಪೊರೆಲ್ ಕೇವಲ 5ರನ್ ಗಳಿಸಿದ್ದು ಬಿಟ್ಟರೇ ಉಳಿದ ಯಾರೊಬ್ಬರು ಕ್ರೀಸ್ನಲ್ಲಿ ಹೆಚ್ಚುಹೊತ್ತು ಉಳಿಯಲಿಲ್ಲ. ಕೊನೆಯಲ್ಲಿ ಅನ್ರಿಚ್ ನಾರ್ಟ್ಜೆ 23 ರನ್ ಹಾಗೂ ಕುಲ್ದೀಪ್ ಯಾದವ್ 7 ರನ್ ಗಳಿಸಿ ಅಜೇಯರಾಗುಳಿದರು.
ಆರ್ಸಿಬಿ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ವಿಜಯಕುಮಾರ್ ವೈಶಾಕ್ ಭರ್ಜರಿ 4 ಓವರ್ಗಳಲ್ಲಿ 20 ರನ್ ನೀಡಿ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಕಿತ್ತರೆ, ವೇಯ್ನ್ ಪಾರ್ನೆಲ್, ವಾನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರಂಭದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಮೊದಲ ವಿಕೆಟ್ ಪತನಕ್ಕೆ ಈ ಜೋಡಿ 4.4 ಓವರ್ಗಳಲ್ಲಿ 42 ರನ್ ಕಲೆಹಾಕಿತ್ತು. ಈ ವೇಳೆ 16 ಎಸೆತಗಳಲ್ಲಿ 22 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿದ್ದ ನಾಯಕ ಡುಪ್ಲೆಸಿಸ್ ವಿಕೆಟ್ ಒಪ್ಪಿಸಿದರು.
ನಂತರ ಬಂದ ಮಹಿಪಾಲ್ ಲೊಮ್ರೊರ್ 18 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಸಮೇತ 26 ರನ್ ಗಳಿಸಿ ಔಟಾದರು. ಈ ಬೆನ್ನಲ್ಲೇ ವಿರಾಟ್ 34 ಎಸೆತಗಳಲ್ಲಿ 50 ರನ್ (6 ಬೌಂಡರಿ, 1 ಸಿಕ್ಸರ್) ಗಳಿಸಿ, ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ವಿರಾಟ್ ಕೊಹ್ಲಿ ಬಳಿಕ ಕ್ರೀಸ್ಗೆ ಬಂದ ಗ್ಲೆನ್ ಮ್ಯಾಕ್ಸ್ವೆಲ್ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ್ರು. 13 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ನೊಂದಿಗೆ 24 ರನ್ ಬಾರಿಸಿದ್ದರು. ತಾವು ಎದುರಿಸಿದ 14ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಸಿಡಿಸುವ ಬರದಲ್ಲಿ ಕ್ಯಾಚ್ ನೀಡಿ ಔಟಾದರು. ಇದರಿಂದ 200 ರನ್ಗಳ ಗಡಿ ತಲುಪುವ ನಿರೀಕ್ಷೆಯಲ್ಲಿದ್ದ ಆರ್ಸಿಬಿ ತಂಡಕ್ಕೆ ನಿರಾಸೆಯಾಯಿತು.
ನಂತರ ಕಣಕ್ಕಿಳಿದವರಲ್ಲಿ ಹರ್ಷಲ್ ಪಟೇಲ್ 6ರನ್, ಅನುಜ್ ರಾವತ್ 15 ರನ್ ಗಳಿಸಿದರೆ, ಶಹಬಾಜ್ ಅಹ್ಮದ್ 20 ರನ್ ಗಳಿಸಿ ಅಜೇಯರಾಗುಳಿದರು. ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ದಿನೇಶ್ ಕಾರ್ತಿಕ್ ಒಂದೇ ಎಸೆತದಲ್ಲಿ ಡಕೌಟ್ ಆದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಮಾರ್ಷ್ 4 ಓವರ್ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 4 ಓವರ್ಗಳಲ್ಲಿ 23 ರನ್ ನೀಡಿ 2 ವಿಕೆಟ್, ಅಕ್ಷರ್ ಪಟೇಲ್ ಮತ್ತು ಲಲಿತ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.