ಮೈಸೂರು:- ವಿಧಾನಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವೆಂದು ಗುರುತಿಸಿಕೊಂಡಿರುವ ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ , ಹಾಲಿ ಸಚಿವ ವಿ.ಸೋಮಣ್ಣ ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಅರಮನೆ ಎದುರು ಇರುವ ಕೋಟೆ ಆಂಜನೇಯದೇವಸ್ಥಾನ, ಗಣಪತಿದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನೇ ಬೇರೆ, ಸಿದ್ದರಾಮಯ್ಯನವರೇ ಬೇರೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದರು. ನಾನು ಕೇವಲ ಮಂತ್ರಿಯಾಗಿದ್ದೆ. ನಾನು ಅವರಷ್ಟು ದೊಡ್ಡವನಲ್ಲ ಎಂದರು.
ನನ್ನ ಕ್ಷೇತ್ರ, ಸಿದ್ದರಾಮಯ್ಯನವರ ಕ್ಷೇತ್ರ ನೋಡಿ ಜನರು ಮತವನ್ನು ಹಾಕಲಿ. ವರುಣಾವನ್ನು ಗೋವಿಂದರಾಜ ನಗರದಂತೆ ಅಭಿವೃದ್ಧಿ ಮಾಡುತ್ತೇನೆ. ನನ್ನ ಮೇಲೆ ಜನರು ತುಂಬಾ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಈ ಬಾರಿ ಜನರು ನನಗೆ ಆಶೀರ್ವಾದವನ್ನುಮಾಡುವ ವಿಶ್ವಾಸವಿದೆ. ನಿರೀಕ್ಷೆಗೆ ಕಾರಣರಾದ ಪಕ್ಷದ ವರಿಷ್ಠರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇದು ನನ್ನ ಎರಡನೇ ಘಟ್ಟ. ನಿರೀಕ್ಷೆ ಮಾಡದೇ ಬಂದ ದೊಡ್ಡ ಸಂದೇಶ. ಈ ಸಂದೇಶವನ್ನು ನಾನು ಸ್ವೀಕಾರ ಮಾಡಿದ್ದೇನೆ. ಪಕ್ಷದ ಈ ಭಾಗದ ನಮ್ಮೆಲ್ಲ ಮುಖಂಡರು,ಕಾರ್ಯಕರ್ತರು, ಮತದಾರರು ತುಂಬಾ ಚೆನ್ನಾಗಿ ತೆಗೆದುಕೊಂಡಿದ್ದಾರೆಂಬುದು ನನ್ನ ನಂಬಿಕೆ. ಓರ್ವ ಮುಖ್ಯಮಂತ್ರಿಗಳ ಕ್ಷೇತ್ರವೆಂದು ಹೇಳುತ್ತಿದ್ದರು. ನಾನು ನೋಡಿದಾಗ ಎಷ್ಟರಮಟ್ಟಿಗೆ ಸರಿ ಇದೆ ಎಂಬುದು ಜನರಿಗೆ ಅರ್ಥವಾಗಿದೆ. ನನ್ನ ಕ್ಷೇತ್ರವನ್ನು ಆ ಕ್ಷೇತ್ರದೊಂದಿಗೆ ಹೋಲಿಕೆ ಮಾಡಿಕೊಳ್ಳಿ. ಮೂರ್ನಾಲ್ಕು ವರ್ಷಗಳಿಂದ ನನ್ನ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿಯನ್ನು ಮಾಡಿದ್ದೇನೆ. ಅದರ ಕಿರುಹೊತ್ತಿಗೆಯನ್ನೂ ಬಿಡುಗಡೆ ಮಾಡಿದ್ದೇನೆ. ಕೆಲವು ಕಡೆ ಹಂಚಲಾಗಿದೆ. ಉಳಿದಿದ್ದರೆ ತಂದುಕೊಡಲು ಹೇಳಿದ್ದೇನೆ. ಜನರ ತೀರ್ಮಾನ. ಓರ್ವ ಮುಖ್ಯಮಂತ್ರಿ, ಮತ್ತೋರ್ವ ಸಾಮಾನ್ಯ ಮಂತ್ರಿ, ಏನೂ ಡಿಫರೆನ್ಸ್ ಇಲ್ಲ. ಜನರಲ್ಲಿ ಅಭಿವೃದ್ಧಿಯನ್ನು ಮೈಗೂಡಿಸಿಕೊಂಡರೆ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಯಾವ ರೀತಿ ಎಲ್ಲರಿಗೂ ಸಮಾನತೆಯನ್ನು ಕೊಡುವುದರ ಮೂಲಕ ಶಾಂತಿ ನೆಮ್ಮದಿಯ ಬದುಕನ್ನು ಕೊಟ್ಟಿದ್ದಾರೆ. ಅದೇ ರೀತಿ ವರುಣಾ ಕ್ಷೇತ್ರವನ್ನು ಗೋವಿಂದರಾಜ ನಗರ ಮಾಡಬೇಕೆನ್ನುವುದು ನನ್ನ ಬಯಕೆ ಆ ಬಯಕೆಯನ್ನು ಈಡೇರಿಸಿ ಎಂದು ವಿನಂತಿ ಮಾಡುತ್ತೇನೆ ಎಂದರು.
ನನಗೆ ಸಂತೋಷ ಇದೆ, ಆನಂದ ಇದೆ, ಸಮಾಧಾನ ಇದೆ. ಜನ ಯಾರು ಏನೂ ನನಗೇನು ಗೊತ್ತಿಲ್ಲ, ಬೀದಿ ವ್ಯಾಪಾರಿಯಿಂದ ಹಿಡಿದು ಬಡತನದಲ್ಲಿ ಕೂಲಿ ಮಾಡುವವರಿಂದ ಹಿಡಿದು, ಸಾಮಾನ್ಯರಿಂದ, ಕೈಗಾರಿಕೋದ್ಯಮಿಗಳವರೆಗೆ ಎಲ್ಲ ವರ್ಗದ ಜನ ಯಾರೋ ಸೋಮಣ್ಣ ಬೆಂಗಳೂರಿನಿಂದ ಬಂದಿದ್ದಾನೆ. ಬಿಜೆಪಿಯ ನೇತಾರರು ಒಳ್ಳೆಯ ಕೆಲಸಗಾರನನ್ನು ಹಾಕಿದ್ದಾರೆ. ಅವರನ್ನು ಯಾಕೆ ನಾವು ಐದು ವರ್ಷ ಕೊಟ್ಟು ನೋಡೋಣ ಎನ್ನುವ ಮನಸ್ಥಿತಿ ಬರುತ್ತಿದೆ ಎನ್ನುವುದು ನನ್ನ ಅಚಲ ವಿಶ್ವಾಸ ಎಂದು ತಿಳಿಸಿದರು.
ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡಿಯ ದರ್ಶನವನ್ನೂ ಪಡೆದರು.