ಬೆಂಗಳೂರು: ಮ್ಯಾಕ್ಸ್ವೆಲ್, ನಾಯಕ ಡುಪ್ಲೆಸಿಸ್ ಸ್ಫೋಟಕ ಅರ್ಧಶತಕದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತವರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತಿದೆ. ಕ್ಯಾಚ್ ಕೈ ಚೆಲ್ಲಿದ್ದರೂ ಕೊನೆಯಲ್ಲಿ ಬೌಲರ್ಗಳ ಉತ್ತಮ ಆಟದಿಂದ ಬೆಂಗಳೂರು ವಿರುದ್ಧ ಚೆನ್ನೈ 8 ರನ್ಗಳ ಜಯ ಸಾಧಿಸಿದೆ.
ಗೆಲ್ಲಲು 227 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಮ್ಯಾಕ್ಸ್ವೆಲ್ ಮತ್ತು ಡುಪ್ಲೆಸಿಸ್ ಆಟದಿಂದಾಗಿ ಜಯದತ್ತ ಬಂದಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕಳೆದುಕೊಂಡಿದ್ದರಿಂದ ಅಂತಿಮವಾಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಆರಂಭದಲ್ಲೇ ಕುಸಿತ:
ಮೊದಲ ಓವರ್ನಲ್ಲಿ 6 ರನ್ ಗಳಿಸಿದ್ದ ಕೊಹ್ಲಿ ಔಟಾದರು. ಬ್ಯಾಟ್ಗೆ ಬಡಿದ ಚೆಂಡು ಕಾಲಿಗೆ ಸಿಕ್ಕಿ ವಿಕೆಟಿಗೆ ಬಡಿಯಿತು. ನಂತರ ಬಂದ ಮಹಿಪಾಲ್ ಲೋಮ್ರೋರ್ ಸೊನ್ನೆ ಸುತ್ತಿದರು.
2 ಓವರ್ ಅಂತ್ಯಕ್ಕೆ 15 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್ಸಿಬಿಗೆ ನಾಯಕ ಡುಪ್ಲೆಸಿಸ್ ಮತ್ತು ಮ್ಯಾಕ್ಸ್ವೆಲ್ ಜೀವ ತುಂಬಿದರು. ಚೆನ್ನೈ ಬೌಲರ್ಗಳನ್ನು ಚೆಂಡಾಡಿದ ಇಬ್ಬರು ಮೂರನೇ ವಿಕೆಟಿಗೆ 61 ಎಸೆತಗಳಲ್ಲಿ 126 ರನ್ ಜೊತೆಯಾಟವಾಡಿದರು. ಮ್ಯಾಕ್ಸ್ವೆಲ್ 76 ರನ್ (36 ಎಸೆತ, 3 ಬೌಂಡರಿ, 8 ಸಿಕ್ಸರ್) ಡುಪ್ಲೆಸಿಸ್ 62 ರನ್(33 ಎಸೆತ, 5 ಬೌಂಡರಿ, 4 ಸಿಕ್ಸರ್) ಹೊಡೆದು ಔಟಾದರು.
ದಿನೇಶ್ ಕಾರ್ತಿಕ್ 28 ರನ್(14ಎಸೆತ, 3 ಬೌಂಡರಿ, 2 ಸಿಕ್ಸರ್), ಕೊನೆಯಲ್ಲಿ ಪ್ರಭುದೇಸಾಯಿ 19 ರನ್(11 ಎಸೆತ, 2 ಸಿಕ್ಸರ್) ಹೊಡೆದು ಔಟಾದರು. 16.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ಗಳಿಸಿದ್ದ ಬೆಂಗಳೂರು 27 ರನ್ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲನ್ನು ಒಪ್ಪಿಕೊಂಡಿತು.
ಚೆನ್ನೈ ಸವಾಲಿನ ಮೊತ್ತ:
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ 16 ರನ್ ಗಳಿಸುವಷ್ಟರಲ್ಲೇ ಋತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡಿತ್ತು. ಎರಡನೇ ವಿಕೆಟಿಗೆ ಡೆವೊನ್ ಕಾನ್ವೇ ಮತ್ತು ಅಜಿಂಕ್ಯ ರಹಾನೆ 43 ಎಸೆತಗಳಲ್ಲಿ 74 ರನ್ ಜೊತೆಯಾಟವಾಡಿದರು. ರಹಾನೆ 37 ರನ್(20 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.
3ನೇ ವಿಕೆಟಿಗೆ ಕಾನ್ವೇ ಮತ್ತು ಶಿವಂ ದುಬೆ 37 ಎಸೆತಗಳಲ್ಲಿ 80 ರನ್ ಚಚ್ಚಿದರು. ಶಿವಂ ದುಬೆ 52 ರನ್ (27 ಎಸೆತ, 2 ಬೌಂಡರಿ, 5 ಸಿಕ್ಸರ್), ಕಾನ್ವೇ 83 ರನ್(45 ಎಸೆತ, 6 ಬೌಂಡರಿ, 6 ಸಿಕ್ಸರ್) ಹೊಡೆದು ಔಟಾದರು. ಅಂಬಾಟಿ ರಾಯಡು 14 ರನ್, ಮೊಯಿನ್ ಅಲಿ ಔಟಾಗದೇ 19 ರನ್( 9 ಎಸೆತ, 2 ಸಿಕ್ಸರ್) ಹೊಡೆದ ಪರಿಣಾಮ ಚೆನ್ನೈ 6 ವಿಕೆಟ್ ನಷ್ಟಕ್ಕೆ 226 ರನ್ ಹೊಡೆಯಿತು.
ರನ್ ಏರಿದ್ದು ಹೇಗೆ?
50 ರನ್ – 36 ಎಸೆತ
100 ರನ್ – 64 ಎಸೆತ
150 ರನ್ – 87 ಎಸೆತ
200 ರನ್ – 108 ಎಸೆತ
206- ರನ್ – 120 ಎಸೆತ