ಮೈಸೂರು: ಸಿದ್ದರಾಮಯ್ಯರಿಗೆ ಟಿಪ್ಪು ಸುಲ್ತಾನನ ಜನ್ಮದಿನ ಗೊತ್ತು, ಹನುಮನ ಜನ್ಮದಿನ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಭಾನುವಾರ ನಂಜನಗೂಡಿನಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಮನಗರದ ಶಿವ ಬೆಟ್ಟವನ್ನು ಡಿ.ಕೆ ಶಿವಕುಮಾರ್ ಏಸು ಬೆಟ್ಟ ಮಾಡಿದ್ದಾರೆ. ಅವರ ಪಕ್ಷದ ಸಿದ್ದರಾಮಯ್ಯ ಹನುಮ ಜನ್ಮದಿನವನ್ನು ಪ್ರಶ್ನಿಸುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಉಮರ್ ನೇತೃತ್ವದ ತಾಲಿಬಾನ್ ಸರ್ಕಾರದಂತೆ ಇಲ್ಲೂ ತಾಲಿಬಾನ್ ಸರ್ಕಾರ ರಚನೆ ಆಗುತ್ತದೆ ಎಂದು ಕುಟುಕಿದ್ದಾರೆ.
ಬಿಜೆಪಿ ಹೆಚ್ಚಿಸಿರುವ ಮೀಸಲಾತಿಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಿತ್ತುಕೊಳ್ಳುತ್ತದೆ. ಲಿಂಗಾಯತ ಸಿಎಂಗಳು ಭ್ರಷ್ಟರು ಎನ್ನುವ ಸಿದ್ದರಾಮಯ್ಯ ಅವರಿಗೆ ಲಿಂಗಾಯತರು ಪಾಠ ಕಲಿಸಬೇಕು. ಅನ್ನ ದಾಸೋಹ, ಅಕ್ಷರ ದಾಸೋಹ ಮಾಡುವ ಬಸವ ಅನುಯಾಯಿಗಳ ಸಿಎಂಗಳನ್ನು ಸಿದ್ದರಾಮಯ್ಯ ಭ್ರಷ್ಟರು ಎನ್ನುತ್ತಾರೆ. ಇದನ್ನು ಲಿಂಗಾಯತರು ಸಹಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಈಗ ಲಿಂಗಾಯತರ ಬಳಿ ಸಿದ್ದರಾಮಯ್ಯ ಕ್ಷಮೆ ಕೇಳುವುದು ನೋಡಿದರೆ, ಬೆಕ್ಕು ಸನ್ಯಾಸ ಸ್ವೀಕರಿಸಿದಂತೆ ಕಾಣುತ್ತದೆ. ಸಿದ್ದರಾಮಯ್ಯ ಒಬ್ಬ ಜಾತಿವಾದಿ. ಅವರಿಗೆ ಸ್ವಜಾತಿ ಮೇಲೆ ಮಾತ್ರ ಪ್ರೀತಿ. ಇದರಿಂದ ಅವರು ಕಾಂಗ್ರೆಸ್ಗೆ ಭಸ್ಮಾಸುರ ಆಗಿದ್ದಾರೆ. 2013 ರಲ್ಲಿ ಜಿ. ಪರಮೇಶ್ವರ್ ಅವರನ್ನು ಸೋಲಿಸಲು ಹೆಚ್. ವಿಶ್ವನಾಥ್ ಅವರನ್ನು ಎರಡು ಬಾರಿ ಸ್ಪೆಷಲ್ ಹೆಲಿಕಾಪ್ಟರ್ನಲ್ಲಿ ಕಳಿಸಿದ್ದರು. ಅಲ್ಲದೆ ಅವರು ದೇವೇಗೌಡರಿಗೆ ದ್ರೋಹ ಬಗೆದಿದ್ದಾರೆ. ಅವರನ್ನು ಬುಡಸಮೇತ ಕಿತ್ತು ಹಾಕಬೇಕು ಎಂದಿದ್ದಾರೆ.