ಬೆಂಗಳೂರು:- 16ನೇ ವಿಧಾನಸಭೆಯ ಅಧಿವೇಶನದ ಮೊದಲ ದಿನವಾದ ಇಂದು ಸದಸ್ಯರಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು.
ಸದಸ್ಯರ ಪರಸ್ಪರ ಅಭಿನಂದನೆ, ಆಲಿಂಗನ, ಉಭಯ ಕುಶಲೋಪರಿಯ ದೃಶ್ಯಗಳು ಸಾಮಾನ್ಯವಾಗಿದ್ದವು. ಹಾಗೆಯೇ ವಿಧಾನಸೌಧಕ್ಕೆ ಪ್ರವೇಶಿಸುವ ಮುನ್ನ ಹಲವು ಸದಸ್ಯರು ವಿಧಾನಸೌಧದ ಮೆಟ್ಟಿಲಿಗೆ ನಮಸ್ಕರಿಸಿ ಭಕ್ತಿ ಭಾವ ತೋರಿದರು.
ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಸದಸ್ಯರ ಮುಖದಲ್ಲಿ ಚುನಾವಣೆ ಯುದ್ಧ ಗೆದ್ದ ಸಂತಸ ಮನೆ ಮಾಡಿತ್ತು.
ಹಾಗೆಯೇ ವಿಧಾನಸಭೆಗೆ ಆಯ್ಕೆಯಾಗಿರುವ ಎಲ್ಲರ ಮೊಗದಲ್ಲೂ ಮಂದಹಾಸ ಎದ್ದು ಕಾಣುತ್ತಿತ್ತು.
ಪ್ರತಿಯೊಬ್ಬ ಸದಸ್ಯರು ಎಲ್ಲರನ್ನು ಪರಸ್ಪರ ಅಭಿನಂದನೆಗಳ ವಿನಿಮಯ ಮಾಡಿಕೊಂಡು ಉಭಯ ಕುಶಲೋಪರಿಯಲ್ಲಿ ತೊಡಗಿದ್ದರು. ಪಕ್ಷಭೇದ ಮರೆತು ಸದಸ್ಯರುಗಳು ಪರಸ್ಪರ ಅಭಿನಂದನೆ ಮಾಡಿಕೊಂಡು ಚುನಾವಣಾ ಸೋಲು-ಗೆಲುವಿನ ಬಗ್ಗೆಯೂ ಚರ್ಚೆಗಳನ್ನು ನಡೆಸುತ್ತಿದ್ದದು ಕಂಡು ಬಂತು.
ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿದ ಸದಸ್ಯರುಗಳು
ನೂತನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ವಿಧಾನಸಭೆಗೆ ಆಯ್ಕೆಯಾಗಿರುವ ಸದಸ್ಯರುಗಳಲ್ಲಿ ಕೆಲವರು ವಿಧಾನಸೌಧದ ಪ್ರವೇಶಿಸುವ ಮುನ್ನ ವಿಧಾನಸೌಧದ ಮೆಟ್ಟಿಲಿಗೆ ತಲೆಬಾಗಿ ನಮಸ್ಕರಿಸಿದರು.
ಸದಸ್ಯರುಗಳಾದ ಉದಯ್ ಗರುಡಾಚಾರ್, ಕೋನರೆಡ್ಡಿ, ಪುಟ್ಟರಂಗಶೆಟ್ಟಿ, ಸತೀಶ್ ಸೈಲ್, ರಾಮಮೂರ್ತಿ ಇವರುಗಳು ವಿಧಾನಸೌಧ ಪ್ರವೇಶಕ್ಕೂ ಮುನ್ನ ಮೆಟ್ಟಿಲಿಗೆ ತಲೆಬಾಗಿ ಕೈ ಮುಗಿದು ಭಕ್ತಿ ಭಾವ ತೋರಿದರು.
ಫೋಟೋ ಸೆಷನ್
ವಿಧಾನಸಭೆಗೆ ಆಯ್ಕೆಯಾಗಿರುವ ಎಲ್ಲ ಸದಸ್ಯರುಗಳ ಫೊಟೋ ಸೆಷನ್ ಸಹ ವಿಧಾನಸೌಧದ ಮೊಗಸಾಲೆಯಲ್ಲಿ ನಡೆಯಿತು.
ಆಡಳಿತ ಮತ್ತು ವಿರೋಧ ಪಕ್ಷಗಳ ಮೊಗಸಾಲೆಯಲ್ಲಿ ಆಯಾ ಪಕ್ಷಗಳ ಶಾಸಕರುಗಳ ಛಾಯಾಚಿತ್ರಗಳನ್ನು ತೆಗೆಯಲು ವಿಧಾನಸಭೆ ಸಚಿವಾಲಯ ಫೊಟೋ ಸೆಷನ್ ಆಯೋಜಿಸಿತ್ತು.
ಶಾಸಕರುಗಳ ಭಾವಚಿತ್ರಗಳನ್ನು ತೆಗೆದು ಅದನ್ನು ೧೬ನೇ ವಿಧಾನಸಭೆಯ ಶಾಸಕರುಗಳ ಪರಿಚಯ ಪುಸ್ತಕದಲ್ಲಿ ಈ ಭಾವಚಿತ್ರಗಳನ್ನು ಅಳವಡಿಸಲಾಗುತ್ತದೆ. ಹಾಗಾಗಿ ಇಂದು ಶಾಸಕರುಗಳ ಪ್ರಮಾಣ ವಚನದ ಜತೆಗೆ ಅವರ ಫೊಟೋ ಸೆಷನ್ ಸಹ ನಡೆಯಿತು.